ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ತಿಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಕಸಿತ ಭಾರತ ನಿರ್ಮಾಣಕ್ಕೆ ವಿಜ್ಞಾನವನ್ನು ಬಳಸಿಕೊಳ್ಳುವಂತೆ ಯುವ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.
'ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವವರಿಗೆ, ವಿಶೇಷವಾಗಿ ನಮ್ಮ ಯುವ ಆವಿಷ್ಕಾರರಿಗೆ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು.
ವಿಜ್ಞಾನ ಮತ್ತು ನಾವೀನ್ಯತೆಗಳನ್ನು ಜನಪ್ರಿಯಗೊಳಿಸೋಣ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ವಿಜ್ಞಾನವನ್ನು ಸದುಪಯೋಗಪಡಿಸಿಕೊಳ್ಳೋಣ'ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ದಿನ ವಿಜ್ಞಾನಿಗಳಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವಂತೆ ಕಳೆದ ಮನ್ ಕಿ ಬಾತ್ ಸಂಚಿಕೆಯಲ್ಲಿ ಕರೆ ನೀಡಿದ್ದನ್ನು ಅವರು ಇಲ್ಲಿ ಸ್ಮರಿಸಿದ್ದಾರೆ.
ಇದಕ್ಕೂ ಮೊದಲು, ಫೆಬ್ರುವರಿ 23ರ ಮನ್ ಕಿ ಬಾತ್‌ನ 119ನೇ ಸಂಚಿಕೆಯಲ್ಲಿ, ಮಕ್ಕಳು ಮತ್ತು ಯುವಕರಲ್ಲಿ ವಿಜ್ಞಾನದ ಬಗ್ಗೆ ಕುತೂಹಲವನ್ನು ಬೆಳೆಸುವುದಾಗಿ ಹೇಳಿದ್ದರು.
ಮುಂದಿನ ದಿನಗಳಲ್ಲಿ ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನು ಸಂಭ್ರಮಿಸುತ್ತೇವೆ. ನಮ್ಮ ಮಕ್ಕಳು ಮತ್ತು ಯುವಕರು ವಿಜ್ಞಾನದಲ್ಲಿ ಆಸಕ್ತಿ ಮತ್ತು ಉತ್ಸಾಹ ತೋರುವುದು ಬಹಳ ಮುಖ್ಯವಾಗಿದೆ. ಇದಕ್ಕೆ ನನ್ನ ಬಳಿ ಒಂದು ಯೋಜನೆ ಇದೆ. ಇದನ್ನು ನೀವು 'ವಿಜ್ಞಾನಿಯಾಗಿ ಒಂದು ದಿನ' ಎಂದು ಕರೆಯಬಹುದು. ಅಂದರೆ, ನೀವು ಒಂದು ದಿನವನ್ನು ವಿಜ್ಞಾನಿಯಾಗಿ ಕಳೆಯಲು ಪ್ರಯತ್ನಿಸಬೇಕು. ನೀವು ಯಾವುದೇ ದಿನವನ್ನು ನಿಮ್ಮ ಅನುಕೂಲ ಮತ್ತು ಆಯ್ಕೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
1986ರ ಫೆ.26ರಂದು'ರಾಮನ್ ಎಫೆಕ್ಟ್' ಆವಿಷ್ಕಾರದ ಸ್ಮರಣೆಗಾಗಿ ಫೆ.26 ಅನ್ನು ಸರ್ಕಾರ ರಾಷ್ಟ್ರೀಯ ವಿಜ್ಞಾನ ದಿನವೆಂದು ಗೊತ್ತುಪಡಿಸಿದೆ.