ನವದೆಹಲಿ: 'ಅನಿವಾಸಿ ಭಾರತೀಯರು ತಾವು ಇರುವ ಸ್ಥಳದಿಂದಲೇ ಮತ ಚಲಾಯಿಸುವ ವ್ಯವಸ್ಥೆ ಜಾರಿಗೊಳಿಸಲು ಇದು ಸಕಾಲವಾಗಿದೆ. ಜತೆಗೆ ಮತಗಟ್ಟೆವಾರು ಮತ ಪ್ರಮಾಣವನ್ನು ಗೋಪ್ಯವಾಗಿಡಲು ಟೋಟಲೈಸರ್ ವ್ಯವಸ್ಥೆಯನ್ನು ಜಾರಿಗೊಳಿಸುವ ಅಗತ್ಯವಿದೆ' ಎಂದು ಕೇಂದ್ರ ಚುನಾವಣಾ ಆಯೋಗದ ನಿರ್ಗಮಿತ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
65 ವರ್ಷ ಪೂರ್ಣಗೊಂಡ ಬೆನ್ನಲ್ಲೇ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಸೋಮವಾರ ಮಾತನಾಡಿರುವ ಅವರು, 'ವಲಸೆ ಹೋಗಿರುವವರಿಗೆ ತಮ್ಮ ದೇಶದ ಚುನಾವಣೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ವ್ಯವಸ್ಥೆ ಜಾರಿಗೆ ಬರಬೇಕಿದೆ' ಎಂಬುದನ್ನು ಒತ್ತಿ ಹೇಳಿದರು.
'ಮತಗಟ್ಟೆಗಳಲ್ಲಿ ಮತದಾರರಿಗೆ ಬೆರಳಚ್ಚು ಕಡ್ಡಾಯಗೊಳಿಸುವುದರಿಂದ ಹಾಗೂ ರಾಜಕೀಯ ಪಕ್ಷಗಳ ಖರ್ಚು ವೆಚ್ಚಗಳಿಗೆ ಆನ್‌ಲೈನ್ ದಾಖಲಾತಿ ಜಾರಿಗೆ ತರುವುದರಿಂದ ಚುನಾವಣೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ' ಎಂದಿದ್ದಾರೆ.
'ಅನಿಯಂತ್ರಿತ ಸಾಮಾಜಿಕ ಮಾಧ್ಯಮಗಳ ಆಲ್ಗಾರಿದಮ್‌ಗಳು ಜಾಗತಿಕ ಮಟ್ಟದಲ್ಲಿ ಚುನಾವಣಾ ಪ್ರಕ್ರಿಯೆಗೆ ಅಪಾಯಕಾರಿಯಾಗಿವೆ. ಇದನ್ನು ತ್ವರಿತವಾಗಿ ಪರಿಹರಿಸಬೇಕಿದೆ. ಚೇಷ್ಟೆ, ಆಧಾರ ರಹಿತ ಹೇಳಿಕೆ ಮತ್ತು ಪೂರ್ವಯೋಜನೆಯ ಹೇಳಿಕೆಗಳನ್ನು ಎದುರಿಸಲು ಚುನಾವಣಾ ನಿರ್ವಹಣೆಯ ತಂಡವನ್ನು ಕಟ್ಟಬೇಕಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸದ್ಯ ಇರುವ ವ್ಯವಸ್ಥೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ. ಆದರೆ ಅಭ್ಯರ್ಥಿಗೆ ಯಾವ ಬೂತ್‌ನಿಂದ ಎಷ್ಟು ಮತಗಳು ಲಭ್ಯವಾಗಿವೆ ಎಂಬ ಮಾಹಿತಿ ಸಿಗುತ್ತಿರುವುದು ಚುಣಾವಣೋತ್ತರ ಹಿಂಸಾಚಾರಕ್ಕೆ ಕಾರಣವಾಗುತ್ತಿದೆ. ಇದನ್ನು ಪರಿಹರಿಸಲು ಟೋಟಲೈಸರ್ ಎಂಬ ತಂತ್ರಜ್ಞಾನವನ್ನು ಜಾರಿಗೆ ತರಬೇಕಿದೆ. ಇದನ್ನು ಆಯೋಗ ಈಗಾಗಲೇ ಅಭಿವೃದ್ಧಿಪಡಿಸಿದೆ. ಇದರಿಂದ ಅಭ್ಯರ್ಥಿಗಳು ಪಡೆದ ಮತಗಟ್ಟೆವಾರು ಫಲಿತಾಂಶ ಧಕ್ಕದು. ಇದರಿಂದ ಮತದಾರರ ಗೋಪ್ಯತೆ ಕಾಪಾಡಿ, ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕಾಪಾಡಿದಂತಾಗಲಿದೆ' ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.