ನವದೆಹಲಿ: 'ಸಂಸತ್ತಿನ ಅಧಿವೇಶನಕ್ಕೆ ಮುನ್ನ ಭಾರತದಲ್ಲಿ ವಿವಾದದ ಕಿಡಿ ಹೊತ್ತಿಸುವ ಕೆಲಸವನ್ನು ವಿದೇಶಿ ಶಕ್ತಿಗಳು ಮಾಡುತ್ತಾ ಬಂದಿವೆ. ಆದರೆ ಈ ಬಾರಿ ಅದು ನಡೆದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಪ್ರಧಾನಿ, '2014ರಿಂದಲೂ ಇಂತಹ ಕೆಲಸ ನಡೆಯುತ್ತಾ ಬಂದಿರುವುದನ್ನು ಗಮನಿಸಿದ್ದೇನೆ.
ಸಂಸತ್ ಅಧಿವೇಶನದ ಆರಂಭಕ್ಕೆ ಮುನ್ನ ಏನಾದರೊಂದು ವಿವಾದ ಸೃಷ್ಟಿಸಿ ಬೆಂಕಿ ಹಚ್ಚಲಾಗುತ್ತದೆ. ಅಂತಹ ಪ್ರಯತ್ನ ನಡೆಯದೇ ಇರುವ ಅಧಿವೇಶನವನ್ನು ನಾನು ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿ ನೋಡುತ್ತಿದ್ದೇನೆ' ಎಂದರು.
'ವಿವಾದ ಸೃಷ್ಟಿಸಿ ಅಧಿವೇಶನಕ್ಕೆ ತೊಂದರೆ ಉಂಟುಮಾಡುವಂತಹ ಕಿಡಿಗೇಡಿತನದ ಕೆಲಸ ಮಾಡಲು ಕೆಲವರು ಸಿದ್ಧರಿರುತ್ತಾರೆ. ಅಂತಹ ಪ್ರಯತ್ನಗಳಿಗೆ ಉತ್ತೇಜನ ನೀಡುವವರಿಗೆ ಯಾವುದೇ ಕೊರತೆಯೂ ಇಲ್ಲ' ಎಂದು ವಿರೋಧ ಪಕ್ಷಗಳ ಕಾಲೆಳೆದರು.
ಈ ಬಜೆಟ್ ಅಧಿವೇಶನದಲ್ಲಿ ಹಲವಾರು ಐತಿಹಾಸಿಕ ಮಸೂದೆಗಳು ಮತ್ತು ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಇವುಗಳು ಮುಂದೆ ರಾಷ್ಟ್ರವನ್ನು ಬಲಪಡಿಸುವಂತಹ ಕಾನೂನುಗಳಾಗಲಿವೆ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಸಂಸದೆಪ್ರಧಾನಿ ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಕಳೆದ ಅಧಿವೇಶನದಲ್ಲಿ ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ. ಹಾಗಾಗಿ ಇಂತಹ ವಿಷಯಗಳನ್ನು ಮಾತನಾಡುತ್ತಾರೆ.