ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ರಾಷ್ಟ್ರ ರಾಜಧಾನಿಯಲ್ಲಿ ಈ ಹಿಂದಿದ್ದ ತನ್ನ ಕಚೇರಿ ಸ್ಥಳದಲ್ಲೇ ಹೊಸ ಕಚೇರಿ ಸಂಕೀರ್ಣವನ್ನು ನಿರ್ಮಿಸಿದೆ.
3.75 ಎಕರೆ ಜಾಗದಲ್ಲಿ ತಲಾ ಹದಿಮೂರು ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, 300 ಕೊಠಡಿಗಳನ್ನು ಒಳಗೊಂಡಿವೆ.
ಹಿಂದುತ್ವದ ಬಗ್ಗೆ ಒಲವು ಹೊಂದಿರುವ 75 ಸಾವಿರಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಲಾದ ₹150 ಕೋಟಿ ದೇಣಿಗೆ ಮೊತ್ತದಲ್ಲಿ, ಎಂಟು ವರ್ಷದ ಅವಧಿಯಲ್ಲಿ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಕೋವಿಡ್-19 ಪಿಡುಗಿನಿಂದ ನಿರ್ಮಾಣ ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.
ದೆಹಲಿ ಘಟಕವು ಫೆ. 19ರಂದು ಸಂಘಟಿಸಿರುವ 'ಕಾರ್ಯಕರ್ತರ ಸಮ್ಮೇಳನ'ದಲ್ಲಿ ಸರಸಂಘ ಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪಾಲ್ಗೊಳ್ಳಲಿದ್ದಾರೆ. ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾರ್ಚ್ 21ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.