ಮುಂಬೈ: ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಟ್ರೇಡ್ ವಾರ್(Trade War)ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಷೇರು ಸೂಚ್ಯಂಕಗಳು ಜಿಗಿಯಿತು (Stock Market). ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) 1,397 ಅಂಕ ಏರಿಕೊಂಡು 78,583ಕ್ಕೆ ನಿನ್ನೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 378 ಅಂಕ ಏರಿಕೆಯಾಗಿ 23,739ಕ್ಕೆ ಸ್ಥಿರವಾಯಿತು.
ಅಮೆರಿಕವು ಕೆನಡಾ ಮತ್ತು ಮೆಕ್ಸಿಕೊ ವಿರುದ್ಧ ವಿಧಿಸಿದ್ದ ಆಮದು ಸುಂಕ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಇದು ಜಾಗತಿಕ ವಾಣಿಜ್ಯ ಸಮರದ ಭೀತಿಯನ್ನು ತಣ್ಣಗಾಗಿಸಿದೆ. ಏಷ್ಯಾದ ಷೇರು ಮಾರುಕಟ್ಟೆಗೆ ಸಕಾರಾತ್ಮಕ ಸಂದೇಶವನ್ನು ಇದು ರವಾನಿಸಿದೆ. ಜತೆಗೆ ಆಟೊಮೊಬೈಲ್ ಕ್ಷೇತ್ರದಲ್ಲಿ ಉಂಟಾಗಿರುವ ಬೆಳವಣಿಗೆ ಹೂಡಿಕೆದಾರರಲ್ಲಿ ಹುಮ್ಮಸ್ಸು ತುಂಬಿಸಿತು.
ಬಿಎಸ್‌ಇ ನೋಂದಾಯಿತ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯವು 3.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, 423 ಲಕ್ಷ ಕೋಟಿ ರೂ.ಗೆ ಏರಿದೆ.
ಡೊನಾಲ್ಡ್ ಟ್ರಂಪ್ ಅವರು ವಾಣಿಜ್ಯ ಸಮರವನ್ನು 30 ದಿನಗಳಿಗೆ ಮುಂದೂಡಿದ್ದಾರೆ. ಆದರೆ ಅಮರಿಕದ ಬೇಡಿಕೆಗೆ ಕೆನಡಾ ಮತ್ತು ಮೆಕ್ಸಿಕೊ ಸರಿಯಾಗಿ ಸ್ಪಂದಿಸಬೇಕು ಎಂಬ ಷರತ್ತನ್ನೂ ಟ್ರಂಪ್ ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ: Stock Market: ಕಡಿಮೆ ದರದಲ್ಲಿ 8 ಟಾಟಾ ಸ್ಟಾಕ್ಸ್! ಕುಬೇರರಾಗಲು ಸುವರ್ಣಾವಕಾಶ
ಯುರೊ ಎದುರು ಡಾಲರ್ ತನ್ನ ಮೌಲ್ಯದಲ್ಲಿ ತುಸು ಕಳೆದುಕೊಂಡಿರುವುದು ಕೂಡ ಪ್ರಭಾವ ಬೀರಿತು. ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು ಇಳಿಸುವ ನಿರೀಕ್ಷೆ ಇದೆ. ಜಪಾನ್‌ನಲ್ಲಿ ಷೇರು ಸೂಚ್ಯಂಕ ಏರಿತು. ಜನವರಿಯಲ್ಲಿ ಮಾರುತಿ ಸುಜುಕಿ ಸೇರಿದಂತೆ ಆಟೊಮೊಬೈಲ್ ಕಂಪನಿಗಳ ಸೇಲ್ಸ್ ಉತ್ತಮ ಮಟ್ಟದಲ್ಲಿತ್ತು. 12-13 ವಲಯಗಳಲ್ಲಿ ಷೇರುಗಳು ಲಾಭ ಗಳಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 3,958 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದರು. ಟಾಟಾ ಸಮೂಹದ ಟೈಟನ್ ಕಂಪನಿಯು ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, 1,047 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಒಟ್ಟು ಅದಾಯವು 17,723 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ದರ ಏರಿಕೆಯಾಯಿತು.