ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಮೆರಿಕದ ಪ್ರಸಿದ್ಧ ಆಟೊಮೊಬೈಲ್ ಕಂಪನಿ 'ಟೆಸ್ಲಾ' ಸಿಇಒ ಉದ್ಯಮಿ ಎಲಾನ್ ಮಸ್ಕ್ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದರು.
ಈ ಮಹತ್ವದ ಬೆಳವಣಿಗೆಯ ನಂತರ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮಾರಾಟ ಘಟಕಗಳನ್ನು (ಶೋರೂಂ) ಆರಂಭಿಸುವುದಕ್ಕಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ಟೆಸ್ಲಾ ಕಂಪನಿ ಒಟ್ಟು 13 ಬಗೆಯ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಈ ಕುರಿತು ಜಾಹೀರಾತು ನೋಟಿಸ್ ಅನ್ನು ಲಿಂಕ್ಡಿನ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಮೂಲಕ ಭಾರತದ ವಾಹನಲೋಕದ ಮಾರುಕಟ್ಟೆಯನ್ನು ಪ್ರವೇಶಿಸಲು ಟೆಸ್ಲಾ ತಯಾರು ಮಾಡಿಕೊಂಡಿದೆ.
ಇದೇ ವರ್ಷಾಂತ್ಯಕ್ಕೆ ಕಾರು ಮಾರಾಟದ ರಿಟೇಲ್ ಮಳಿಗೆಗಳು ಭಾರತದಲ್ಲಿ ಅನಾವರಣಗೊಳ್ಳಲಿವೆ ಎನ್ನಲಾಗಿದ್ದು, ಆರಂಭಿಕವಾಗಿ ಮುಂಬೈನಲ್ಲಿ ಕಾರ್ಯಾಚರಣೆ ಬಿರುಸುಗೊಳ್ಳಲಿದೆ. ಸದ್ಯ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯೂ ಮುಂಬೈ ಅನ್ನು ಕೇಂದ್ರಿಕರಿಸಿ ನಡೆಯುತ್ತಿದೆ.
ಆರಂಭಿಕವಾಗಿ ಬಜೆಟ್ ಸ್ನೇಹಿ ಟೆಸ್ಲಾ ಕಾರುಗಳನ್ನು ಕಂಪನಿ ಮಾರಾಟ ಮಾಡಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 13, 14 ರಂದು ಅಮೆರಿಕಕ್ಕೆ ಭೇಟಿ ನೀಡಿದ್ದರು.
ಟೆಸ್ಲಾ ಕಂಪನಿಯು ಅಮೆರಿಕದಲ್ಲಿ ಜನಸಾಮಾನ್ಯರ ಬಳಕೆಯ ವಿವಿಧ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಯವರೆಗೆ ಭಾರತ, ಅಮೆರಿಕದಿಂದ ರಪ್ತಾಗುವ ಸರಕುಗಳ ಮೇಲೆ ಭಾರಿ ಪ್ರಮಾಣದಲ್ಲಿ ಆಮದು ಸುಂಕ ವಿಧಿಸುತ್ತಿದ್ದ ಕಾರಣ ಟೆಸ್ಲಾ ಭಾರತದಲ್ಲಿ ವ್ಯಾಪಾರ ಆರಂಭಿಸಲು ಹಿಂದೇಟು ಹಾಕುತ್ತಿತ್ತು. ಇದೀಗ ಸುಂಕವನ್ನು ಕಡಿತಗೊಳಿಸಿರುವುದರಿಂದ ಟೆಸ್ಲಾ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.
ದಕ್ಷಿಣ ಏಷ್ಯಾದಲ್ಲಿ ಟೆಸ್ಲಾ ಮಾರುಕಟ್ಟೆಯನ್ನು ವಿಸ್ತರಿಸುತ್ತಿರುವುದು ಇದು ಮೊದಲ ಪ್ರಯತ್ನ.