HEALTH TIPS

ಈಶಾ ಫೌಂಡೇಷನ್‌ ವಿರುದ್ಧ ಅರ್ಜಿ ಸಲ್ಲಿಸಲು ವಿಳಂಬ: TNPCBಗೆ 'ಸುಪ್ರೀಂ' ತರಾಟೆ

ನವದೆಹಲಿ: ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈಶಾ ಫೌಂಡೇಷನ್ ವಿರುದ್ಧ ನೀಡಲಾಗಿದ್ದ ಶೋಕಾಸ್ ನೋಟಿಸ್ ರದ್ದುಗೊಳಿಸಿದ ಆದೇಶವನ್ನು ಪ್ರಶ್ನಿಸಲು ಎರಡು ವರ್ಷಗಳಷ್ಟು ಸುದೀರ್ಘ ಅವಧಿಯನ್ನು ತೆಗೆದುಕೊಂಡ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಟಿಎನ್‌ಪಿಸಿಬಿ) ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಜಗ್ಗಿ ವಾಸುದೇವ ಅವರ 'ಈಶಾ ಫೌಂಡೇಷನ್' 2006ರಿಂದ 2014ರ ಅವಧಿಯಲ್ಲಿ ನಿರ್ಮಿಸಿರುವ ವಿವಿಧ ಕಟ್ಟಡಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಟಿಎನ್‌ಪಿಸಿಬಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಫೌಂಡೇಷನ್ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿತ್ತು. 2022ರ ಡಿಸೆಂಬರ್‌ 14ರಂದು ಈಶಾ ಫೌಂಡೇಷನ್‌ ಪರ ತೀರ್ಪು ನೀಡಿ ಮದ್ರಾಸ್‌ ಹೈಕೋರ್ಟ್‌, ಶೋಕಾಸ್ ನೋಟಿಸ್‌ ರದ್ದುಗೊಳಿಸಿತ್ತು.

ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಟಿಎನ್‌ಪಿಸಿಬಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ. ಟಿಎನ್‌ಪಿಸಿಬಿ ತಡವಾಗಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್‌.ಕೋಟೀಶ್ವರ್‌ ಸಿಂಗ್ ಅವರನ್ನೊಳಗೊಂಡ ಪೀಠವು 'ಸ್ನೇಹಪರ ಪಂದ್ಯ' ಎಂದು ಬಣ್ಣಿಸಿತಲ್ಲದೆ, 'ಶೋಕಾಸ್‌ ನೋಟಿಸ್‌ ರದ್ದುಗೊಳಿಸಿರುವ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್‌ ಕೂಡಾ ತನ್ನ ಮುದ್ರೆಯೊತ್ತಬೇಕು ಎಂದು ಅಧಿಕಾರಿಗಳು ಬಯಸುತ್ತಿದ್ದಾರೆ' ಎಂದಿತು.

ಈಶಾ ಫೌಂಡೇಶನ್‌ನವರು ಕೊಯಮತ್ತೂರು ಜಿಲ್ಲೆಯ ವೆಳ್ಳಿಯಂಗಿರಿಯಲ್ಲಿ ಯೋಗ ಮತ್ತು ಧ್ಯಾನ ಕೇಂದ್ರವನ್ನು ನಿರ್ಮಿಸಿದ್ದು, ಆ ಕಟ್ಟಡವು ಪರಿಸರಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನೂ ಪಾಲಿಸಿದೆ ಎಂಬುದನ್ನು ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಪಿ.ಎಸ್‌.ರಾಮನ್ ಅವರಿಗೆ ಪೀಠವು ಸೂಚಿಸಿತು.

'ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅಧಿಕಾರಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿಲ್ಲ ಏಕೆ? ಸರ್ಕಾರವು ತಡವಾಗಿ ಅರ್ಜಿ ಸಲ್ಲಿಸಿದಾಗ ನಮಗೆ ಅನುಮಾನ ಮೂಡುತ್ತದೆ' ಎಂದು ಹೇಳಿತು.

'ಶೋಕಾಸ್ ನೋಟಿಸ್ ನೀಡಿ ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಇತರ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದರೆ ಅವರ (ಟಿಎನ್‌ಪಿಸಿಬಿ) ಕಣ್ಣೆದುರೇ ನಿರ್ಮಾಣಗೊಂಡ ಕಟ್ಟಡವನ್ನು ಕೆಡವಲು ನಿಮಗೆ ಅನುಮತಿಸಲಾಗುವುದಿಲ್ಲ. ಏಕೆಂದರೆ, ಅದು ಸಣ್ಣ ಗುಡಿಸಲು ಅಲ್ಲ. ಲಕ್ಷಕ್ಕೂ ಅಧಿಕ ಚದರ ಯಾರ್ಡ್‌ ವಿಸ್ತೀರ್ಣದಲ್ಲಿ ಅಲ್ಲಿ ಕಟ್ಟಡ ನಿರ್ಮಾಣಗೊಂಡಿದೆ' ಎಂದು ರಾಜ್ಯ ಸರ್ಕಾರಕ್ಕೆ ಪೀಠವು ತಿಳಿಸಿತು.

ಈಶಾ ಫೌಂಡೇಷನ್‌ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರ ಮನವಿಯಂತೆ ಪೀಠವು ಮುಂದಿನ ವಿಚಾರಣೆಯನ್ನು ಶಿವರಾತ್ರಿ ಬಳಿಕ ನಿಗದಿಪಡಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries