ಕೀವ್ : ಯುದ್ಧವನ್ನು ಅಂತ್ಯಗೊಳಿಸಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡುತ್ತಿರುವ ಹೇಳಿಕೆಗಳನ್ನು ನಂಬಬೇಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ವಿಶ್ವ ನಾಯಕರಿಗೆ ಕರೆ ನೀಡಿದ್ದಾರೆ.
ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಮಾತುಕತೆ ನಡೆಸಿರುವ ಝೆಲೆನ್‌ಸ್ಕಿ, ಎಕ್ಸ್/ಟ್ವಿಟರ್‌ನಲ್ಲಿ ಗುರುವಾರ ಪೋಸ್ಟ್ ಹಂಚಿಕೊಂಡಿದ್ದಾರೆ.
ಉಕ್ರೇನ್‌ನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ಅಗತ್ಯ ಅಂಶಗಳ ಕುರಿತು ಹಾಗೂ ಯುರೋಪ್, ಅಮೆರಿಕದ ಉಪಸ್ಥಿತಿ ಇಲ್ಲದೆ, ಪುಟಿನ್ ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ಆರಂಭಿಸುವುದಿಲ್ಲ ಎಂಬ ಬಗ್ಗೆ ಟಸ್ಕ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಸಂಭಾಷಣೆ ಕುರಿತೂ ತಿಳಿಸಿದ್ದೇನೆ. ಇಡೀ ಯುರೋಪ್ ಭವಿಷ್ಯದ ದೃಷ್ಟಿಯಿಂದ ಉತ್ತಮ ಫಲಿತಾಂಶ ಸಾಧಿಸುವುದು ಹಾಗೂ ನ್ಯಾಟೊ ಸದಸ್ಯತ್ವದ ವಿಚಾರ, ಉಕ್ರೇನ್‌ನಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ ಎಂದು ಝೆಲೆನ್‌ಸ್ಕಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಅವರು, ಯುದ್ಧವನ್ನು ಅಂತ್ಯಗೊಳಿಸಲು ಸಿದ್ಧವಿರುವುದಾಗಿ ಪುಟಿನ್ ಹೇಳಿರುವುದನ್ನು ವಿಶ್ವ ನಾಯಕರು ನಂಬಬಾರದು ಎಂದು ಎಚ್ಚರಿಸಿದ್ದಾರೆ.
ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಇತ್ತೀಚೆಗೆ ಹೇಳಿದ್ದ ಡೊನಾಲ್ಡ್ ಟ್ರಂಪ್, ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಪುಟಿನ್ ಬಯಸುತ್ತಿದ್ದಾರೆ ಎಂದಿದ್ದರು.
ರಷ್ಯಾ ಹಾಗೂ ಉಕ್ರೇನ್, 2022ರ ಫೆಬ್ರುವರಿಯಿಂದ ಸಂಘರ್ಷ ನಡೆಸುತ್ತಿವೆ.