ನವದಹೆಲಿ: ಕೇಂದ್ರ ಬಜೆಟ್ ಒಂದು ರೀತಿ 'ಗುಂಡೇಟಿಗೆ ಸಣ್ಣ ಬ್ಯಾಂಡೇಜ್ ಹಾಕಿದಂತಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
'ಜಾಗತಿಕ ಅನಿಶ್ಚಿತತೆಯ ನಡುವೆ ದೇಶದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಂದು ಮಾದರಿ ಬದಲಾವಣೆಯನ್ನು ತರಬೇಕಾದ ಅನಿವಾರ್ಯತೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶನಿವಾರ) ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದೆ.
'ಈ ಬಾರಿಯ ಬಜೆಟ್‌ನಲ್ಲಿ ಬಡತನ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ. ಮಧ್ಯಮವರ್ಗ ಮತ್ತು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದ್ದು, 2047ಕ್ಕೆ ಬಡತನ ಮುಕ್ತ ಭಾರತ ನಿರ್ಮಿಸುವ ಸಂಕಲ್ಪ ಹೊಂದಿದ್ದೇವೆ' ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
'ಈ ಬಾರಿಯ ಕೇಂದ್ರ ಬಜೆಟ್, ದೇಶದ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ನಮ್ಮ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಬಜೆಟ್‌ನಲ್ಲಿ ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ಸಿಗುವಂತಹ ಹಲವು ಅಂಶಗಳಿವೆ. ಜತೆಗೆ, ಗಿಗ್ ಕಾರ್ಮಿಕರ ಕಲ್ಯಾಣ ಕ್ರಮಗಳು ಕಾರ್ಮಿಕರ ಘನತೆಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತವೆ' ಎಂದು ತಿಳಿಸಿದ್ದಾರೆ.
'ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜತೆಗೆ, ಸಾಮಾನ್ಯ ಪ್ರಜೆಯ ಜೇಬು ತುಂಬಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. 'ವಿಕಸಿತ ಭಾರತ'ದ ನಮ್ಮ ಧ್ಯೇಯವನ್ನು ಸಾಮಾನ್ಯ ಜನರು ಕೊಂಡೊಯ್ಯುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ' ಎಂದೂ ಮೋದಿ ಬಣ್ಣಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ, 'ರೈತರಿಂದ ಮಧ್ಯಮ ವರ್ಗದವರೆಗೆ, ಆರೋಗ್ಯ, ಸ್ಟಾರ್ಟ್‌ಅಪ್‌ಗಳಿಂದ ನಾವೀನ್ಯತೆ ಮತ್ತು ಹೂಡಿಕೆಯವರೆಗಿನ ಪ್ರತಿಯೊಂದು ವಲಯವನ್ನು ಬಜೆಟ್ ಒಳಗೊಂಡಿದೆ. ಇದು ಮೋದಿಯವರ ಸ್ವಾವಲಂಬಿ ಭಾರತಕ್ಕೆ ಮಾರ್ಗಸೂಚಿಯಾಗಿದೆ' ಎಂದು ತಿಳಿಸಿದ್ದಾರೆ.
'₹12 ಲಕ್ಷ ಆದಾಯದವರೆಗೆ ಶೂನ್ಯ ಆದಾಯ ತೆರಿಗೆ ಘೋಷಿಸಲಾಗಿದೆ. ಈ ಉದ್ದೇಶಿತ ತೆರಿಗೆ ವಿನಾಯಿತಿಯು ಮಧ್ಯಮ ವರ್ಗದ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು. ಇದು #ViksitBharatBudget2025' ಎಂದು ಶಾ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.