ನವದೆಹಲಿ: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕ, ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯು (USAID) ನೀಡುವ ನೆರವಿನ ವಿಚಾರವು ಸುದ್ದಿಯಲ್ಲಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೇರುವ ಮೊದಲು ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ USAID ನೀಡಿದ ನೆರವಿನ ಕುರಿತು, ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ 'ಸಿಎನ್‌ಎನ್-ನ್ಯೂಸ್18' ಇತ್ತೀಚೆಗೆ ವರದಿ ಮಾಡಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೇರುವ ಮೊದಲು ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ USAID ನೀಡಿದ ನೆರವಿನ ಕುರಿತು, ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ 'ಸಿಎನ್‌ಎನ್-ನ್ಯೂಸ್18' ಇತ್ತೀಚೆಗೆ ವರದಿ ಮಾಡಿದೆ.
ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, 2014ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರ ಸೋಲು ಕಂಡಿದೆ. ಒಂದುವೇಳೆ, ಅಮೆರಿಕದ ನೆರವಿನ ಲಾಭವಾಗಿದ್ದರೆ, ಅದು ಬಿಜೆಪಿಗೆ ಎಂದಿತ್ತು.
ನೆರವಿನ ವಿಚಾರವಾಗಿ ಮಸ್ಕ್ ಕೈಗೊಂಡ ನಿಲುವಿನ ಬಗ್ಗೆ, 'ಭಾರತದಲ್ಲಿ ನಡೆಯುವ ಮತದಾನಕ್ಕೆ ನಾವು ₹ 182 ಕೋಟಿ ವ್ಯಯಿಸುವ ಅಗತ್ಯವೇನಿದೆ' ಎಂದು ಕೇಳಿದ್ದ ಡೊನಾಲ್ಡ್ ಟ್ರಂಪ್, 'ಹಿಂದಿನ ಅಧ್ಯಕ್ಷ ಜೋ ಬೈಡನ್ ಸರ್ಕಾರವು, ಭಾರತದಲ್ಲಿ ಬೇರೊಬ್ಬರು ಅಧಿಕಾರಕ್ಕೇರುವುದನ್ನು ಬಯಸಿತ್ತು ಎನಿಸುತ್ತದೆ. ಈ ಕುರಿತು ಭಾರತ ಸರ್ಕಾರಕ್ಕೆ ತಿಳಿಸಬೇಕಿದೆ' ಎಂದಿದ್ದರು.
ಟ್ರಂಪ್ ಹೇಳಿಕೆಯನ್ನು ಅಸಂಬದ್ಧ ಎಂದಿರುವ ಕಾಂಗ್ರೆಸ್, 'USAID ನೆರವಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಶ್ವೇತಪತ್ರ ಹೊರಡಿಸಲಿ' ಎಂದು ಆಗ್ರಹಿಸಿದೆ.
ಯುಪಿಎ ಅವಧಿಯಲ್ಲಿ, USAIDನಿಂದ ಭಾರತಕ್ಕೆ ಹೆಚ್ಚಿನ ನೆರವು ಬಂದಿರುವುದು, ಇಲ್ಲಿನ ಆಡಳಿತದಲ್ಲಿ ವಿದೇಶಿ ಶಕ್ತಿಗಳ ಭಾಗವಹಿಸುವಿಕೆಯನ್ನು ಒತ್ತಿ ಹೇಳುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿರುವುದಾಗಿ 'ಸಿಎನ್‌ಎನ್-ನ್ಯೂಸ್18' ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಕಾಂಗ್ರೆಸ್ ಹಾಗೂ ಅದರ ನಿಕಟವರ್ತಿಗಳೊಂದಿಗೆ ಸೇರಿ ನೀತಿ ನಿಯಮಗಳ ವಿಚಾರದಲ್ಲಿ USAID ಹಸ್ತಕ್ಷೇಪ ಮಾಡುತ್ತಿತ್ತು. ಅದು ಎನ್‌ಡಿಎ ಕಾಲಘಟ್ಟದಲ್ಲಿ ಗಣನೀಯವಾಗಿ ಕಡಿಮೆಯಾಯಿತು. ಮೋದಿ ಸರ್ಕಾರವು ವಿದೇಶೀಯರ ಹಸ್ತಕ್ಷೇಪವನ್ನು ದೂರ ಇಟ್ಟಿದೆ ಎಂಬುದಕ್ಕೆ ವಿದೇಶಿ ಶಕ್ತಿಗಳ ಪ್ರಭಾವ ಕುಸಿದಿರುವುದೇ ಸಾಕ್ಷಿ' ಎಂದೂ ಮೂಲಗಳು ಹೇಳಿವೆ.
ಯುಪಿಎ ಅವಧಿಯಲ್ಲಿ ಸರ್ಕಾರಿ ಸಂಸ್ಥೆಗಳಿಗೆ ₹ 1,760 ಕೋಟಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಸುಮಾರು ₹ 17,970 ಕೋಟಿ ನೆರವು ಬಂದಿದೆ. ಆದರೆ, ಎನ್‌ಡಿಎ ಅಧಿಕಾರಕ್ಕೇರಿದ ಬಳಿಕ ಸರ್ಕಾರಿ ಸಂಸ್ಥೆಗಳಿಗೆ ಬರುತ್ತಿದ್ದ ನೆರವು 2014-15ರ ಅವಧಿಯಲ್ಲಿ ₹ 8.6 ಕೋಟಿಗೆ ಕುಸಿದಿತ್ತು. ಅದೇ ವೇಳೆ, ಸರ್ಕಾರೇತರ ಸಂಸ್ಥೆಗಳಿಗೆ ₹ 22,000 ಕೋಟಿ ನೆರವು ಬಂದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
'ಸರ್ಕಾರದ ನೇರ ಪಾಲುದಾರಿಕೆ ಇರುವ ಸಂಸ್ಥೆಗಳಿಗೆ ನೆರವು ನೀಡುವ ಬದಲು, ದೇಶ ವಿರೋಧಿ ಸಂಸ್ಥೆಗಳು ಮತ್ತು ವೇದಿಕೆಗಳಿಗೆ ನೆರವು ನೀಡುವ ಕಡೆಗೆ USAID ಗಮನ ಹರಿಸಿದೆ ಎಂಬುದು ಇದರಿಂದ ಬಹಿರಂಗವಾಗುತ್ತದೆ' ಎಂದು ಬಿಜೆಪಿ ನಾಯಕರು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖ ರಾಜಕೀಯ ಸಂದರ್ಭಗಳಲ್ಲಿ USAID ನೆರವಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಎನ್‌ಡಿಎ ಅಧಿಕಾರದಲ್ಲಿದ್ದಾಗ, ಚುನಾವಣೆಗಳಿಗೂ ಮುನ್ನ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲು, ನಾಗರಿಕ ಸಮಾಜದಲ್ಲಿನ ಸಂಘಟನೆಗಳನ್ನು ಬಲಪಡಿಸಲು ಮತ್ತು ರಾಜಕೀಯ ನಿರೂಪಣೆಗಳನ್ನು ರೂಪಿಸುವ ನಿಟ್ಟಿನಲ್ಲಿ ನೆರವಿನಲ್ಲಿ ಹೆಚ್ಚಳ ಕಂಡುಬಂದಿರುವುದನ್ನು ವರದಿಯಲ್ಲಿ ನೀಡಲಾಗಿರುವ ಅಂಕಿ-ಅಂಶಗಳು ಪ್ರತಿಪಾದಿಸುತ್ತವೆ.
ವರದಿಯ ಪ್ರಕಾರ, 2001ರಲ್ಲಿ 1 ಸಾವಿರ ಕೋಟಿಯಷ್ಟಿದ್ದ (121 ಮಿಲಿಯನ್ ಡಾಲರ್) USAID ನೆರವಿನ ಪ್ರಮಾಣ, 2002ರಲ್ಲಿ ₹ 1,300 ಕೋಟಿಗೆ (154 ಮಿಲಿಯನ್ ಡಾಲರ್) ಏರಿತ್ತು. ಅದೇ ರೀತಿ, ಸರ್ಕಾರೇತರ ಸಂಸ್ಥೆಗಳಿಗೆ 2020 ರಲ್ಲಿ ₹ 719 ಕೋಟಿ (83 ಮಿಲಿಯನ್ ಡಾಲರ್) ಇದ್ದದ್ದು, 2022ರ ಹೊತ್ತಿಗೆ ಅಂದರೆ, 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದಕ್ಕೆ ಕೇವಲ ಎರಡೇ ವರ್ಷ ಮೊದಲು ₹ 1,970 ಕೋಟಿಗೆ (228 ಮಿಲಿಯನ್ ಡಾಲರ್) ಏರಿತ್ತು.
ಒಟ್ಟಾರೆ ಈ ವರದಿಯ ಪ್ರಕಾರ, USAID ನೆರವಿನ ಮೂಲಕ ಭಾರತದಲ್ಲಿ ರಾಜಕೀಯ ಚರ್ಚೆಗಳನ್ನು ಸಂಘಟಿಸಲು, ವಿಶೇಷವಾಗಿ ಬಿಜೆಪಿ ವಿರುದ್ಧದ ಅಭಿಪ್ರಾಯ ರೂಪಿಸಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬ ಕಳವಳವನ್ನು ಬಿಜೆಪಿ ಮೂಲಗಳು ವ್ಯಕ್ತಪಡಿಸಿವೆ.