ಕೀವ್: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ಭದ್ರತಾ ನೆರವು ಮುಂದುವರಿಯಬೇಕಾದರೆ, ಉಕ್ರೇನ್‌ನಲ್ಲಿರುವ ಅಪರೂಪದ ಖನಿಜ ನಿಕ್ಷೇಪಗಳನ್ನು ತನಗೆ ನೀಡಬೇಕು ಎಂಬ ವಾಷಿಂಗ್ಟನ್ ಬೇಡಿಕೆಯು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಿದ್ದೆಗೆಡಿಸಿದೆ.
ಉಕ್ರೇನ್‌ನಲ್ಲಿ ಲಭ್ಯವಿರುವ ಅಪರೂಪದ ಖನಿಜ ಹಾಗೂ ಲೋಹಗಳಾದ ಟೈಟಾನಿಯಂ, ಗುಲಿಯಂಗೆ ಅಮೆರಿಕ ಬೇಡಿಕೆ ಇಟ್ಟಿದೆ.
ಸದ್ಯ ಇಂಥ ಅಪರೂಪದ ಲೋಹಗಳು ಚೀನಾ ಬಳಿ ಇದ್ದು, ಅದು ಜಗತ್ತಿನ ಪೂರಕ ಸರಪಳಿಯನ್ನು ನಿರ್ವಹಿಸುತ್ತಿದೆ. ಬೀಜಿಂಗ್‌ನ ಈ ಹಿಡಿತವನ್ನು ತಪ್ಪಿಸಲು ವಾಷಿಂಗ್ಟನ್ ಮುಂದಡಿ ಇಟ್ಟಿದೆ.
ಇದೇ ವಿಷಯವಾಗಿ ಇತ್ತೀಚೆಗೆ ಉಕ್ರೇನ್ ಮತ್ತು ಅಮೆರಿಕ ನಡುವೆ ಮಾತುಕತೆ ನಡೆದಿತ್ತು. ರಷ್ಯಾದೊಂದಿಗಿನ ಯುದ್ಧದಲ್ಲಿ ಅಮೆರಿಕ ನೀಡಿದ್ದ ಸೇನಾ ನೆರವಿಗೆ ಬದಲಾಗಿ 500 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಮೌಲ್ಯದ ಖನಿಜವನ್ನು ತನಗೆ ನೀಡಬೇಕು ಎಂದು ವಾಷಿಂಗ್ಟನ್ ಬೇಡಿಕೆ ಇಟ್ಟಿತ್ತು. ಆದರೆ ಈ ಬೇಡಿಕೆಯನ್ನು ಝೆಲೆನ್‌ಸ್ಕಿ ತಿರಸ್ಕರಿಸಿದ್ದರು.
'ಅಮೆರಿಕ ನೀಡಿದ ನೆರವಿಗೆ ಬದಲಾಗಿ 500 ಶತಕೋಟಿ ಡಾಲರ್ ನೀಡಿ ಎಂದು ಕೇಳುವ ಬದಲು ಅದೇ ಮೌಲ್ಯದ ಖನಿಜವನ್ನು ನೀಡಿ ಎಂದಿತು. ಆದರೆ ಅದೇನು ಗಂಭೀರ ಪ್ರಮಾಣದ ಚರ್ಚೆ ಆಗಿರಲಿಲ್ಲ. ಅಮೆರಿಕ ನೀಡಿದ ನೆರವಿಗೆ ಬದಲಾಗಿದೆ ಉಕ್ರೇನ್‌ನಲ್ಲಿರುವ ಖನಿಜ ನಿಕ್ಷೇಪದ ಶೇ 50ರಷ್ಟು ಮಾಲೀಕತ್ವವನ್ನು ಅವರಿಗೆ ಬಿಟ್ಟುಕೊಡುವ ಬೇಡಿಕೆ ಇಡಲಾಗಿತ್ತು' ಎಂದು ಝೆಲೆನ್‌ಸ್ಕಿ ಫೆ. 19ರಂದು ಹೇಳಿದ್ದರು.
2022ರ ಫೆಬ್ರುವರಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಸಮರ ಸಾರಿತು. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳಿಗೆ 67 ಶತಕೋಟಿ ಅಮೆರಿಕನ್ ಡಾಲರ್ ಹಾಗೂ ಬಜೆಟ್‌ಗೆ ನೇರ ನೆರವಾಗಿ 31.5 ಶತಕೋಟಿ ಅಮೆರಿಕನ್ ಡಾಲರ್ ನೆರವು ನೀಡಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಕೇಳಿದ ಖನಿಜ ನೀಡಲು ನಿರಾಕರಿಸಿದ ಝೆಲೆನ್‌ಸ್ಕಿ ನಡೆಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಾಗಿದೆ.
'ಖನಿಜ ಹಂಚಿಕೊಳ್ಳುವ ಒಪ್ಪಂದಕ್ಕೆ ಮ್ಯುನಿಕ್‌ನಲ್ಲಿ ಸಹಿ ಹಾಕುವುದಾಗಿ ಝೆಲೆನ್‌ಸ್ಕಿ ಹೇಳಿದ್ದರು. ಆದರೆ ಅವರು ನುಡಿದಂತೆ ನಡೆಯಲಿಲ್ಲ' ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಫೆ. 20ರಂದು ಆರೋಪಿಸಿದ್ದಾರೆ.
'ಈ ಆರ್ಥಿಕ ಒಪ್ಪಂದದ ಮೂಲಕ ಉಕ್ರೇನ್ ನಾಗರಿಕರನ್ನು ಅಮೆರಿಕ ಬಳಿ ತರುವುದು ಹಾಗೂ ಅಮೆರಿಕದ ನಾಗರಿಕರಿಗೆ ಈ ಕುರಿತು ಮನವರಿಕೆ ಮಾಡಿಕೊಡುವ ಉದ್ದೇಶ ವಾಷಿಂಗ್ಟನದ್ದು. ನಂತರ ಮಾತುಕತೆಯ ಮೇಜಿಗೆ ರಷ್ಯಾವನ್ನು ಆಹ್ವಾನಿಸಿ, ಅವರ ಮೇಲಿನ ಕೆಲ ನಿರ್ಬಂಧಗಳನ್ನು ತೆರವುಗೊಳಿಸುವ ಭರವಸೆ ನೀಡಿ, ಬೇಡಿಕೆ ಈಡೇರಿಸಿಕೊಳ್ಳುವ ಉದ್ದೇಶವಿದೆ' ಎಂದು ಸ್ಕಾಟ್ ಹೇಳಿದ್ದರು.
'ಅಮೆರಿಕದ ಷರತ್ತಿನ ಕುರಿತು ಆಲೋಚಿಸಲು ಕೆಲ ಕಾಲ ಬೇಕಿದೆ. ನಾನೇನಿದ್ದರೂ ಆಡಳಿತಗಾರನೇ ಹೊರತು, ಸಂದಾನಕಾರನಲ್ಲ. ಈ ಕುರಿತು ಚರ್ಚಿಸಿ ನಂತರ ತೀರ್ಮಾನಿಸಲಾಗುವುದು' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ ಎಂದು ವರದಿಯಾಗಿದೆ.