ಊಖಿಮಠ: ಉತ್ತರಾಖಂಡದ ಚಾರ್‌ಧಾಮ ಯಾತ್ರೆಗಳಲ್ಲಿ ಪ್ರಸಿದ್ಧವಾಗಿರುವ ಕೇದಾರನಾಥ ಮಂದಿರವು ಮೇ.2ರಂದು ಬೆಳಗ್ಗೆ 7 ಗಂಟೆ ವೃಷಭ ಲಗ್ನದಲ್ಲಿ ಬಾಗಿಲು ತೆರೆಯಲಿದೆ.
ಇತ್ತೀಚೆಗೆ ಊಖಿಮಠದಲ್ಲಿ ಕೇದಾರನಾಥ ರಾವಲ್ ಜಗದ್ಗುರು ಶ್ರೀಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಡೆದ ಬದರಿನಾಥ ಕೇದಾರನಾಥ ಮಂದಿರ ಸಮಿತಿ ಸಭೆಯಲ್ಲಿ ಪಂಚಾಂಗ ನಿಷ್ಕರ್ಷೆಯ ನಂತರ ಪರಂಪರೆಯಂತೆ ವೈಶಾಖ ಮಾಸದ ಪಂಚಮಿಯಂದು ಬಾಗಿಲು ತೆರೆಯುವ ದಿನಾಂಕವನ್ನು ನಿಗದಿಗೊಳಿಸಲಾಯಿತು .
ಸಮಿತಿ ಸಭೆಯಲ್ಲಿ ಮಂದಿರ ಸಮಿತಿಯ ಅಧಿಕಾರಿಗಳು, ಕೇದಾರನಾಥ ಮಂದಿರದ ಪಂಚ ಪೂಜಾರಿಗಳು, ವೇದಪಾಠಿಗಳು ಉಪಸ್ಥಿತರಿದ್ದು, ಈ ವರ್ಷದ ಕೇದಾರನಾಥ ಜ್ಯೋತಿರ್ಲಿಂಗದ ಪೂಜೆ ಮಾಡುವ ಪ್ರಧಾನ ಅರ್ಚಕರಾಗಿ ಕನ್ನಡಿಗರಾದ ಶ್ರೀವಾಗೀಶಲಿಂಗ ಅವರನ್ನು ನೇಮಕ ಮಾಡಿ ಜಗದ್ಗುರುಗಳು ಘೋಷಣೆ ಮಾಡಿದರು.
ಆರುತಿಂಗಳ ಕಾಲ ತೆರೆದಿರುವ ಕೇದಾರನಾಥ ಮಂದಿರವು ಪ್ರತಿ ದೀಪಾವಳಿ ಪಾಡ್ಯದಂದು ಮುಚ್ಚಲ್ಪಡುತ್ತದೆ. ಹಾಗೆ ಮಂದಿರ ಮುಚ್ಚಿದ ನಂತರ ಕೇದಾರನಾಥನ ಉತ್ಸವಮೂರ್ತಿಯು ಊಖಿಮಠದ ಓಂಕಾರೇಶ್ವರ ಮಂದಿರದ ಗದ್ದಿಸ್ಥಾನದಲ್ಲಿ ಪೂಜೆಗೊಳ್ಳುತ್ತದೆ. ದೇವಾಲಯದ ಬಾಗಿಲು ತೆರೆಯುವ ಮೂರುದಿನಗಳ ಮೊದಲೇ ಊಖಿಮಠದಿಂದ ಸಕಲ ಮಿಲಿಟರಿ ವಾದ್ಯಮೇಳದೊಂದಿಗೆ ಜಗದ್ಗುರುಗಳ ಕಿರೀಟ ಧರಿಸಿದ ಕೇದಾರನಾಥನ ಉತ್ಸವ ಮೂರ್ತಿಯ ಡೋಲಿ ಮೆರವಣಿಗೆ ಆರಂಭವಾಗುತ್ತದೆ. ಬಾಗಿಲು ತೆರೆದ ನಂತರ ಕೇದಾರನಾಥನಿಗೆ ಕಿರೀಟ ತೊಡಿಸಿ ಪೂಜೆ ಸಲ್ಲಿಸುವುದು ಪರಂಪರೆ.