ಬೈರೂತ್: ಸಿರಿಯಾದ ಪದಚ್ಯುತ ಅಧ್ಯಕ್ಷ ಬಷರ್ ಅಸ್ಸಾದ್ ಅವರ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವೆ ಎರಡು ದಿನಗಳ ಕಾಲ ನಡೆದ ಘರ್ಷಣೆ ಮತ್ತು ಅದರ ನಂತರ ನಡೆದ ಸೇಡಿನ ಹತ್ಯೆಗಳಲ್ಲಿ ಸಾವಿಗೀಡಾದವರ ಸಂಖ್ಯೆ 1,000ಕ್ಕೂ ಹೆಚ್ಚಾಗಿದೆ ಎಂದು ಯುದ್ಧ ಮೇಲ್ವಿಚಾರಣಾ ಗುಂಪು ಶನಿವಾರ ತಿಳಿಸಿದೆ.
ಸುಮಾರು 750 ನಾಗರಿಕರು ಮೃತಪಟ್ಟಿದ್ದಾರೆ. 14 ವರ್ಷಗಳ ಹಿಂದೆ ಸಿರಿಯಾದ ಸಂಘರ್ಷ ಪ್ರಾರಂಭವಾದಾಗಿನಿಂದ ಇದು ಅತ್ಯಂತ ಭೀಕರ ಹಿಂಸಾಚಾರಗಳಲ್ಲಿ ಒಂದಾಗಿದೆ.
ಬ್ರಿಟನ್ ಮೂಲದ ಸಿರಿಯಾದ ಮಾನವ ಹಕ್ಕುಗಳ ಕುರಿತಾದ ಯುದ್ಧ ಮೇಲ್ವಿಚಾರಣಾ ಸಂಸ್ಥೆಯು, 745 ನಾಗರಿಕರ ಜೊತೆಗೆ, ಸರ್ಕಾರಿ ಭದ್ರತಾ ಪಡೆಗಳ 125 ಸದಸ್ಯರು ಮತ್ತು ಪದಚ್ಯುತ ಅಧ್ಯಕ್ಷ ಬಷರ್ ಅಸ್ಸಾದ್ ಅವರೊಂದಿಗೆ ಸಂಬಂಧ ಹೊಂದಿರುವ ಸಶಸ್ತ್ರ ಗುಂಪುಗಳ 148 ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಕರಾವಳಿ ನಗರವಾದ ಲಟಾಕಿಯಾದ ಸುತ್ತಮುತ್ತಲಿನ ದೊಡ್ಡ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಮತ್ತು ಅನೇಕ ಬೇಕರಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದೆ.
ಗುರುವಾರ ಭುಗಿಲೆದ್ದ ಘರ್ಷಣೆಗಳು, ಅಸ್ಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ದಂಗೆಕೋರರು ಅಧಿಕಾರ ವಹಿಸಿಕೊಂಡ ಮೂರು ತಿಂಗಳ ನಂತರ, ಡಮಾಸ್ಕಸ್‌ನಲ್ಲಿ ಹೊಸ ಸರ್ಕಾರಕ್ಕೆ ಪ್ರಮುಖ ಸವಾಲಾಗಿದೆ.
ಅಸ್ಸಾದ್ ಬೆಂಗಲಿಗರ ದಾಳಿಗಳಿಗೆ ತಾವು ಪ್ರತಿಕ್ರಿಯಿಸುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ. ವ್ಯಾಪಕ ಹಿಂಸಾಚಾರಕ್ಕೆ "ವೈಯಕ್ತಿಕ ಕ್ರಮಗಳು" ಕಾರಣವೆಂದು ಹೇಳಿದೆ.
ಅಸ್ಸಾದ್ ಅವರ ಅಲ್ಪಸಂಖ್ಯಾತ ಅಲಾವೈಟ್ ಪಂಥದ ಸದಸ್ಯರ ವಿರುದ್ಧ ಸರ್ಕಾರಕ್ಕೆ ನಿಷ್ಠರಾಗಿರುವ ಸುನ್ನಿ ಮುಸ್ಲಿಂ ಬಂದೂಕುಧಾರಿಗಳು ಶುಕ್ರವಾರ ಪ್ರಾರಂಭಿಸಿದ ಸೇಡಿನ ಹತ್ಯೆಗಳು ಹಿಂದಿನ ಸರ್ಕಾರವನ್ನು ಉರುಳಿಸಲು ಕಾರಣವಾದ ಬಣವಾದ ಹಯಾತ್ ತಹ್ರಿರ್ ಅಲ್-ಶಾಮ್‌ಗೆ ದೊಡ್ಡ ಹೊಡೆತವಾಗಿದೆ.