ಅಂಕಾರಾ: ಇಸ್ತಾಂಬುಲ್ ಮೇಯರ್ ಎಕ್ರೆಂ ಇಮಾಮೊಗ್ಲು ಅವರ ಬಂಧನ ವಿರೋಧಿಸಿ ಟರ್ಕಿಯಲ್ಲಿ ಕಳೆದ ಐದು ದಿನಗಳಿಂದ ನೂರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಈ ಪೈಕಿ 1,133 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದುವರೆಗಿನ ಪ್ರತಿಭಟನೆಗಳಲ್ಲಿ 123 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಭಯದ ವಾತಾವರಣ ಸೃಷ್ಟಿಯಾಗಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಅಲಿ ಯರ್ಲಕಾಯ ಅವರು ಸೋಮವಾರ ತಿಳಿಸಿದ್ದಾರೆ.
'ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ' ನಾಯಕ ಇಮಾಮೊಗ್ಲು ಅವರನ್ನು ಕಳೆದ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕಳೆದೊಂದು ದಶಕದಲ್ಲಿ ಟರ್ಕಿಯಲ್ಲಿ ನಡೆದ ಬಹುದೊಡ್ಡ ಪ್ರತಿಭಟನೆ ಎನ್ನಲಾಗಿದೆ.
ಭಾನುವಾರ ಇಮಾಮೊಗ್ಲು ಅವರ ವಿರುದ್ಧ ದಾಖಲಾದ ಮತ್ತು ವಿಚಾರಣೆಗೆ ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಅವರನ್ನು ನ್ಯಾಯಾಲಯವು ಕಾರಾಗೃಹಕ್ಕೆ ಕಳುಹಿಸಿದೆ.
ಪೊಲೀಸರು ವಶಕ್ಕೆ ಪಡೆದವರ ಪೈಕಿ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ವರದಿ ಮಾಡುತ್ತಿದ್ದ 9 ಪತ್ರಕರ್ತರು ಇದ್ದಾರೆ ಎಂದು ಟರ್ಕಿಯ ಪತ್ರಕರ್ತರ ಸಂಘಟನೆಯೊಂದು ಆರೋಪಿಸಿದೆ.