ರಾಯ್‌ಪುರ: ಕಂಪ್ಯೂಟರ್ ಪ್ರತಿ ಅಥವಾ ಟ್ಯಾಬ್ ಬಳಕೆಯ ಈ ಕಾಲದಲ್ಲಿ ಛತ್ತೀಸಗಢದ ಹಣಕಾಸು ಸಚಿವ ಒ.ಪಿ ಚೌಧರಿ ಅವರು 100 ಪುಟಗಳ ಬಜೆಟ್ ಅನ್ನು ಕೈಯಲ್ಲಿ ಬರೆದು ಮಂಡಿಸಿದ್ದಾರೆ.
ಚೌಧರಿ ಅವರು ಸೋಮವಾರ ರಾಜ್ಯದ 2025-26ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ₹1.65 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.
ಛತ್ತೀಸಗಢ ವಿಧಾನಸಭೆಯ ಇತಿಹಾಸದಲ್ಲಿ ಕಂಪ್ಯೂಟರ್‌ನಲ್ಲಿ ಟೈಪಿಸಿದ ಪ್ರತಿ ಬಳಸದೆ ಹಸ್ತ ಪ್ರತಿಯಲ್ಲಿ ಬಜೆಟ್ ಮಂಡನೆಯಾಗಿರುವುದು ಇದೇ ಮೊದಲ ಬಾರಿಗೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಚೌಧರಿ ಅವರು, 'ಛತ್ತೀಸಗಢಕ್ಕೆ ಐತಿಹಾಸಿಕ ಉಪಕ್ರಮ. ರಾಜ್ಯದ ಮೊದಲ ಕೈಬರಹದ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ 100 ಪುಟಗಳ ಬಜೆಟ್ ಸಂಪ್ರದಾಯವು ಸ್ವಂತಿಕೆಯ ಹೊಸ ಉದಾಹರಣೆಯಾಗಿದೆ' ಎಂದು ಬರೆದುಕೊಂಡಿದ್ದಾರೆ.
ಒ.ಪಿ. ಚೌಧರಿ ಈ ಹಿಂದೆ ರಾಯ್‌ಪುರದ ಜಿಲ್ಲಾಧಿಕಾರಿಯಾಗಿದ್ದರು. ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 22 ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಹೆಗ್ಗುರುತು ಇವರದ್ದು.
ಛತ್ತೀಸಗಢದಲ್ಲಿ ಬಿಜೆಪಿ ಆಡಳಿತವಿದ್ದು, ವಿಷ್ಣು ದೇವ್ ಸಾಯಿ ಮುಖ್ಯಮಂತ್ರಿಯಾಗಿದ್ದಾರೆ.