ಬದಿಯಡ್ಕ : ಯಕ್ಷ ಮಿತ್ರರು ನಾರಂಪಾಡಿ ಇದರ 10ನೇ ವಾರ್ಷಿಕೋತ್ಸವ ನಾರಂಪಾಡಿ ಗುತ್ತು ಪರಿಸರದಲ್ಲಿ ಇತ್ತೀಚೆಗೆ ಜರಗಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಶಂಕರ ನಾರಾಯಣ ಮಯ್ಯ ಅಧ್ಯಕ್ಷತೆ ವಹಿಸಿ ನಾತನಾಡಿ, ಯಕ್ಷಗಾನ ನಾಟ್ಯ ಲಯ ತಾಳ ಇವುಗಳ ಸಮ್ಮಿಲನವಾಗಿದೆ. ಪೌರಾಣಿಕ ಹಿನ್ನೆಲೆಗಳು ಮುಂದಿನ ತಲೆಮಾರಿಗೆ ತಿಳಿಯುವಂತೆ ಮಾಡುವ ನಮ್ಮ ಸಂಸ್ಕøತಿಯ ಅತಿ ದೊಡ್ಡ ಕಲೆ. ಯಕ್ಷಮಿತ್ರರು ಮಾಡುವಂತಹ ಗಂಡುಮಿಟ್ಟಿನ ಕಲೆಯಾದ ಯಕ್ಷಗಾನದ ಕಲಾ ಪ್ರೇಮವು ಶ್ಲಾಘನೀಯ. ಮುಂದಕ್ಕೂ ಯಕ್ಷಮಿತ್ರರು ಇಂತಹ ಒಳ್ಳೆಯ ಯಕ್ಷಗಾನಗಳನ್ನು ಕಲಾ ಪ್ರೇಮಿಗಳಿಗೆ ಉಣಿಸುವಂತಾಗಲಿ ಎಂದರು.
ಬಾಲಕೃಷ್ಣ ಮಾಸ್ತರ್ ನಾರಂಪಾಡಿ ಮಾತನಾಡಿ, ಯಕ್ಷಮಿತ್ರರು ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಈ ವರ್ಷ ದಶಮಾನೋತ್ಸವದ ಸಂದರ್ಭದಲ್ಲಿ ಮಹತ್ತರವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿರುವುದು ಶ್ಲಾಘನೀಯ. ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿದ ಮಹನೀಯರನ್ನು ಗೌರವಿಸುವಂತಹ ಕಾರ್ಯಕ್ರಮ ಯೋಗ ಭಾಗ್ಯ ಯಕ್ಷಮಿತ್ರರು ಸಂಘಕ್ಕೆ ದೊರಕುವಂತಾಗಲಿ ಎಂದರು.
ರಮಾನಾಥ ರೈ ಮೇಗಿನ ಕಡಾರು, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನಂತಗೋವಿಂದ ಶರ್ಮ ಕೋಳಿಕ್ಕಜೆ, ಪನಡ್ಕ ಗುತ್ತು ಅಮ್ಮು ರೈ ಚಟ್ಲ, ಶಂಕರ ರೈ ಮಾಸ್ತರ್, ನಾರಾಯಣ ಮವ್ವಾರು, ರಾಧಾಕೃಷ್ಣ ರೈ ಮುಂಡಾಸು, ರಾಜೇಶ್ ಅಗಲ್ಪಾಡಿ, ಚೇಂಗಳ ಗ್ರಾ. ಪಂ. ಸದಸ್ಯ ಲತೀಫ್ ನಾರಂಪಾಡಿ, ವಿಜಯ ನಾಯರ್ ಪುಂಡೂರು, ರವೀಂದ್ರ ರೈ ಗೋಸಾಡ, ಹರೀಶ್ ನಾರಂಪಾಡಿ, ಸತೀಶ್ ಭಂಡಾರಿ ಮೇಗಿನ ಬೆಳಿಂಜ, ಕೆದಂಬಾಡಿ ತ್ಯಾಗರಾಜ ರೈ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.