ನವದೆಹಲಿ: 12ನೇ ತರಗತಿಯ ಹಿಂದಿ ಪರೀಕ್ಷೆಗೆ ಮಾರ್ಚ್ 15ರಂದು ದಿನಾಂಕ ನಿಗದಿಯಾಗಿದೆ. ಆ ದಿನ ಹೋಳಿ ಹಬ್ಬದಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಅಂಥವರಿಗೆ ಮತ್ತೊಂದು ಅವಕಾಶ ನೀಡಲಾಗುವುದು ಎಂದು ಸಿಬಿಎಸ್‌ಇ ಗುರುವಾರ ಹೇಳಿದೆ.
'ದೇಶದ ಬಹುತೇಕ ಭಾಗಗಳಲ್ಲಿ ಮಾರ್ಚ್ 14ರಂದು ಹೋಳಿ ಆಚರಿಸಲಾಗುತ್ತಿದೆ. ಇನ್ನೂ ಕೆಲವೆಡೆ ಮಾರ್ಚ್ 15ರಂದು ಆಚರಿಸಲಾಗುತ್ತಿದೆ ಎಂದು ಹಲವರು ಸಿಬಿಎಸ್‌ಇ ಗಮನಕ್ಕೆ ತಂದಿದ್ದಾರೆ' ಎಂದು ಮಂಡಳಿಯ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ.
'ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಬಂದ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಮಂಡಳಿಯು ಈ ನಿರ್ಧಾರಕ್ಕೆ ಬಂದಿದೆ. ಈ ಹಿಂದೆ ನಿಗದಿಯಾದ ದಿನಾಂಕದಂದೇ ಪರೀಕ್ಷೆ ನಡೆಯಲಿದೆ. ಆದರೂ ಹೋಳಿಯಿಂದಾಗಿ ಮಾರ್ಚ್ 15ರಂದು ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನಂತರದ ದಿನಾಂಕದಂದು ಅವಕಾಶ ಕಲ್ಪಿಸಲಾಗುವುದು' ಎಂದಿದ್ದಾರೆ.
'ಈ ಪರೀಕ್ಷೆಯಲ್ಲಿ ಮಾರ್ಚ್ 15ರಂದು ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಪರೀಕ್ಷೆ ತಪ್ಪಿಸಿಕೊಂಡವರಿಗೂ ಅವಕಾಶ ನೀಡಲಾಗುವುದು' ಎಂದು ಭರವಸೆ ನೀಡಿದ್ದಾರೆ.