ಮುಂಬೈ: ದೇಶದಲ್ಲಿ ಅಕ್ರಮ ಬಾಂಗ್ಲಾಗೇಶಿ ವಲಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಮಹಾರಾಷ್ಟ್ರದಾದ್ಯಂತ 1.23 ಲಕ್ಷ ಅಕ್ರಮ ಬಾಂಗ್ಲಾದೇಶ ವಲಸಿಗರಿಗೆ ಅಕ್ರಮವಾಗಿ ಜನನ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಹೌದು.. ಮಹಾರಾಷ್ಟ್ರದಾದ್ಯಂತ 1.23 ಲಕ್ಷ ಅಕ್ರಮ ಬಾಂಗ್ಲಾದೇಶ ವಲಸಿಗರಿಗೆ ಅಕ್ರಮವಾಗಿ ಜನನ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯೊಂದರಲ್ಲೇ ಲಂಚ ಪಡೆದು ಸುಮಾರು 3,056 ಅಕ್ರಮ ಬಾಂಗ್ಲಾದೇಶ ವಲಸಿಗರಿಗೆ ಜನನ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಮಹಾರಾಷ್ಟ್ರ BJP ನಾಯಕ ಕಿರಿಟ್ ಸೋಮಯ್ಯ ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರವಾಗಿ ಲಾತೂರ್ ನಲ್ಲಿ ಕಲೆಕ್ಟರ್ ಅವರನ್ನು ಭೇಟಿಯಾದ ಕಿರಿಟ್ ಸೋಮಯ್ಯ, 'ಲಾತೂರ್ ನಲ್ಲಿ ಸುಮಾರು 3,056 ಅಕ್ರಮ ಬಾಂಗ್ಲಾದೇಶ ವಲಸಿಗರಿಗೆ ವಂಚನೆಯ ಮೂಲಕ ಜನನ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಬಗ್ಗೆ ನಾವು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಡಳಿತ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ ಎಂದರು.
ಅಂತೆಯೇ "ನಕಲಿ ದಾಖಲೆಗಳನ್ನು ಸಲ್ಲಿಸಿದ ನಂತರ ಮಹಾರಾಷ್ಟ್ರದಲ್ಲಿ 1.23 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಗಳು ಜನನ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಲಾತೂರ್ ಜಿಲ್ಲೆಯೊಂದರಲ್ಲೇ ಲಂಚ ಪಡೆದು 3,056 ಅಕ್ರಮ ಬಾಂಗ್ಲಾದೇಶ ವಲಸಿಗರಿಗೆ ಜನನ ಪ್ರಮಾಣಪತ್ರಗಳನ್ನು ನೀಡಲಾಗಿದೆ. ನೆರೆಯ ದೇಶದ 3,421 ವ್ಯಕ್ತಿಗಳು ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಗಳನ್ನು ಮಾತ್ರ ಸಲ್ಲಿಸುವ ಮೂಲಕ ಜನನ ಪ್ರಮಾಣಪತ್ರಗಳನ್ನು ಕೋರಿದ್ದರು. ಈ ಪೈಕಿ 3,056 ಜನರು ಜನನ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ" ಎಂದು ಅವರು ಹೇಳಿದ್ದಾರೆ.