ನವದೆಹಲಿ: 12ನೇ ತರಗತಿ ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ ಸಾಮಾನ್ಯ ಕ್ಯಾಲ್ಕುಲೇಟರ್ ಬಳಸಲು ಅನುಮತಿಸುವ ಪ್ರಸ್ತಾಪವನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರಿಶೀಲಿಸುತ್ತಿದೆ ಎಂದು ಮಂಡಳಿಯ ಅಧಿಕಾರಿ ತಿಳಿಸಿದ್ದಾರೆ.
'ಮಂಡಳಿಯ ಪಠ್ಯಕ್ರಮ ಸಮಿತಿಯು ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಶೇಕಡವಾರುಗಳಂತಹ ಲೆಕ್ಕಚಾರಗಳಿಗೆ ಮಾತ್ರ ಸೀಮಿತವಾಗಿರುವ ಕ್ಯಾಲ್ಕುಲೇಟರ್‌ಗಳ ಬಳಕೆಗೆ ಅನುಮತಿ ನೀಡಬೇಕೆಂದು ಪ್ರಸ್ತಾಪಿಸಿದೆ' ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು, ಸುಧಾರಿತ ಮತ್ತು ಪ್ರೋಗ್ರಾಮೆಬಲ್ ಸಾಧನಗಳ ಬಳಕೆಯನ್ನು ತಡೆಯಲು ಕ್ಯಾಲ್ಕುಲೇಟರ್ ಮಾದರಿಗಳ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಈ ಕ್ರಮದಿಂದ ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ ಮತ್ತು ಕೇಸ್ ಸ್ಟಡಿಗಳಂತಹ ಪ್ರಶ್ನೆಗಳಿಗೆ ಹೆಚ್ಚು ಸಮಯ ವಿನಿಯೋಗಿಸಲು ಸಹಾಯವಾಗುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದು ಪಠ್ಯಕ್ರಮ ಸಮಿತಿ ವಾದಿಸಿದೆ ಎಂದರು.