HEALTH TIPS

ಗಿಳಿವಿಂಡಲ್ಲಿ ಗೋವಿಂದ ಪೈಗಳ 142ನೇ ಜನ್ಮ ದಿನಾಚರಣೆ-ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ

Top Post Ad

Click to join Samarasasudhi Official Whatsapp Group

Qries

ಮಂಜೇಶ್ವರ: ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಕೇರಳದಲ್ಲಿರುವುದರಿಂದ ಅದನ್ನು ಸಮರ್ಥವಾಗಿ ನಿರ್ವಹಿಸಬೇಕಾದ್ದು ಎಲ್ಲರಿಗಿಂತ ಹೆಚ್ಚು ಕೇರಳ ಸರ್ಕಾರದ ಹೊಣೆ. ರಾಷ್ಟ್ರಕವಿಯ ಕನಸುಗಳನ್ನು ಸಾಕಾರಗೊಳಿಸಲು, ಸಾಹಿತ್ತಿಕ ಮೌಲ್ಯಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ಪರಂಪರೆಗೆ ಧಕ್ಕೆಬಾರದಂತೆ ಆಧುನಿಕ ಕೌಶಲ್ಯಗಳಿಂದೊಡಗೂಡಿ ಸ್ಮಾರಕ ನಿವೇಶನ ಇನ್ನಷ್ಟು ಪ್ರವರ್ಧಮಾನಕ್ಕೆ ತರಬೇಕು ಎಂದು ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ವೈದ್ಯ ಡಾ.ರಮಾನಂದ ಬನಾರಿ ತಿಳಿಸಿದರು.

 ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಜೇಶ್ವರ ಗಿಳಿವಿಂಡಲ್ಲಿ ಭಾನುವಾರ ನಡೆದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 142ನೇ ಜನ್ಮದಿನಾಚರಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.


ಗೋವಿಂದ ಪೈಗಳು ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಾಚೇತನರಾಗಿದ್ದು, ಅವರ ನಿವಾಸ ಗಿಳಿವಿಂಡು ಆ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವುದು ನಮ್ಮೆಲ್ಲರ ಹೊಣೆ. ಬಹುಮುಖಿ ವ್ಯಕ್ತಿತ್ವದ ಪೈಗಳು ಎಂದಿಗೂ ಕನ್ನಡ ಸಹಿತ ದೇಶದ ಎಲ್ಲಾ ಸಾಹಿತ್ಯ ವಲಯಗಳಲ್ಲೂ ಅಸಾಮಾನ್ಯ ಕೊಡುಗೆ ನೀಡಿದ ಅಪೂರ್ವ ಮಹಾಪುರುಷರಾಗಿದ್ದರೆಂದು ನೆನಪಿಸಿದರು.


ಸಮಾರಂಭದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕೊಡಮಾಡುವ ರಾಷ್ಟ್ರಕವಿ ಮಂಜೇಶ್ವರ ಸ್ಮಾರಕ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಅನುವಾದಕ, ಸಾಹಿತಿ ಕೆ.ವಿ.ಕುಮಾರನ್ ಮಾಸ್ತರ್ ಅವರಿಗೆ ಪ್ರದಾನಗೈದು, ಸ್ಮಾರಕ ಸಮಿತಿ ಹೊಸತಾಗಿ ಪ್ರಕಟಿಸಿದ ಗೋವಿಂದ ಪೈಗಳ ಸಮಗ್ರ ಬದುಕು-ಸಾಧನೆಗಳ ಕುರಿತಾದ ‘ಸುರಭಿ’ ಕೃತಿಯನ್ನು ಬಿಡುಗಡೆಗೊಳಿಸಿದ ಉದುಮ ಶಾಸಕ ವಕೀಲ ಸಿ.ಎಚ್.ಕುಂಞಂಬು ಮಾತನಾಡಿ, ಗೋವಿಂದ ಪೈಗಳು ಮರಣಿಸಿದ 40 ವರ್ಷಗಳ ಬಳಿಕ ಅವರ ಕುಟುಂಬ ಸದಸ್ಯರು ಉದಾರವಾಗಿ ನೀಡಿರುವ ವಿಶಾಲ ನಿವೇಶನ ಹಂತಾನುಹಂತವಾಗಿ ಇದೀಗ ಬೆಳೆದುಬರುತ್ತಿದೆ. ಆದರೆ, ಗಡಿ ಭಾಗದ ಈ ಸಾಹಿತ್ಯ ಕೇಂದ್ರದ ಬಗ್ಗೆ ಸಾಹಿತ್ಯ ಪ್ರೇಮಿಗಳಿಂದ ಬೆಂಬಲ ಲಭ್ಯವಾಗದಿರುವುದು ದುಃಖಕರ. ಇಲ್ಲಿಯ ನಿರ್ಮಿತಿಗಳು ಕೇವಲ ಕಟ್ಟಡವಾಗಿರದೆ ನಿರಂತರ ಸಾಹಿತ್ಯ-ಸಾಂಸ್ಕøತಿಕ ಚಟುವಟಿಕೆಗಳ ಕೇಂದ್ರವಾಗಬೇಕು.ಜನರು, ಸಮಾಜವನ್ನು ಸಕಾರಾತ್ಮಕತೆಯತ್ತ ಪ್ರಚೋದಿಸುವ ಪೈಗಳಂತಹ ಸಾಹಿತ್ಯ ಚೇತನಗಳು ಸಜ್ಜನ ಸಮಾಜದ ಸದಾ ಸ್ಮರಣೀಯರು ಎಂದವರು ತಿಳಿಸಿದರು.


ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವಿನೋ ಮೊಂತೆರೋ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಕ.ಸಾ.ಪ.ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಶಸ್ತಿ ಪುರಸ್ಕøತ ಕೆ.ವಿ.ಕುಮಾರನ್ ಮಾಸ್ತರ್ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಗಿಳಿವಿಂಡು ಪ್ರಧಾನ ಕಾರ್ಯದರ್ಶಿ ಎಂ.ಉಮೇಶ ಸಾಲಿಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಮಾಸ್ತರ್ ವಂದಿಸಿದರು. ವನಿತಾ ಆರ್.ಶೆಟ್ಟಿ ಹಾಗೂ ಆಶಾ ದಿಲೀಪ್ ಸುಳ್ಯಮೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ವರ್ಷಾ ಮತ್ತು ಬಳಗ ಮತ್ತು ನಿಶ್ಮಿತ್ ಬಳಗದವರಿಂದ ಗೋವಿಂದ ಪೈ ಕೃತಿಗಳ ಗಾಯನ, ಹಾಗೂ ಸಭಾ ಕಾರ್ಯಕ್ರಮದ ಬಳಿಕ ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಿತು.ಸುರಭಿ ಕೃತಿಯ ಬಗ್ಗೆ ಸಂಪಾದಕಿ ಆಶಾ ದಿಲೀಪ್ ಸುಳ್ಯಮೆ ಮಾತನಾಡಿದರು. ಕೃತಿಗೆ ಬರಹಗಳನ್ನು ನೀಡಿದ ಜಯಂತಿ.ಕೆ, ಡಾ.ಯು.ಮಹೇಶ್ವರಿ, ಡಾ,ಸುಜೇಶ್ ಎಸ್., ಶಿವಶಂಕರ ಪಿ., ಶ್ರೀಲತ ಕೆ., ವನಿತಾ ಆರ್.ಶೆಟ್ಟಿ, ಉಮೇಶ್ ಎಂ.ಸಾಲ್ಯಾನ್ ಮೊದಲಾದವರನ್ನು ಗೌರವಿಸಲಾಯಿತು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries