ನವದೆಹಲಿ : ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಪ್ರತ್ಯೇಕಿಸುವ 'ಸ್ಪೇಸ್ ಡಾಕಿಂಗ್ ಎಕ್ಸ್‌ಪೆರಿಮೆಂಟ್' (ಸ್ಪೇಡೆಕ್ಸ್) ಅನ್ನು ಮಾರ್ಚ್ ಮಧ್ಯಭಾಗದಲ್ಲಿ ಮತ್ತೆ ಆರಂಭಿಸಲಾಗುವುದು ಎಂದು ಇಸ್ರೊ ತಿಳಿಸಿದೆ.
2024ರ ಡಿಸೆಂಬರ್ 30ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ 'ಚೇಸರ್' ಮತ್ತು 'ಟಾರ್ಗೆಟ್' ಎಂಬ ಹೆಸರಿನ ಎರಡು ಪುಟ್ಟ (ಒಂದು ರೆಫ್ರಿಜರೇಟರ್‌ನಷ್ಟು ದೊಡ್ಡದಾದ) ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿತ್ತು.
ಈ ಎರಡು ಉಪಗ್ರಹಗಳನ್ನು ಜೋಡಿಸುವ ಕಾರ್ಯಾಚರಣೆಯು ಜ.16ರಂದು ಯಶಸ್ವಿಯಾಗಿತ್ತು. ಉಪಗ್ರಹಗಳನ್ನು ಜೋಡಣೆ ಮಾಡುವುದೊಂದೇ ಈ ಯೋಜನೆಯ ಉದ್ದೇಶವಲ್ಲ. ಈ ಉಪಗ್ರಹಗಳನ್ನು ಬೇರ್ಪಡಿಸುವುದೂ ಯೋಜನೆಯ ಭಾಗವೇ ಆಗಿದೆ.
ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳುಹಿಸುವ 'ಗಗನಯಾನ' ಯೋಜನೆ, ಚಂದ್ರಯಾನ 4, ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ಮಾದರಿಗಳನ್ನು ತರುವುದು, ಭಾರತೀಯ ಅಂತರಿಕ್ಷ ಕೇಂದ್ರ (ಬಿಎಎಸ್) ಸ್ಥಾಪನೆ ಸೇರಿದಂತೆ ಭಾರತದ ಭವಿಷ್ಯದ ಮಹತ್ವದ ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೊದ ಈ ಪ್ರಯೋಗ ನಾಂದಿಯಾಗಲಿದೆ.
'ಏಕೀಕೃತ ಉಪಗ್ರಹವು ದೀರ್ಘವೃತ್ತದ ಕಕ್ಷೆಯಲ್ಲಿದೆ. ವಿವಿಧ ಪ್ರಯೋಗಗಳನ್ನು ನಡೆಸಲು ಎರಡು ತಿಂಗಳಿಗೊಮ್ಮೆ ಅವಕಾಶ ಪಡೆಯುತ್ತೇವೆ' ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದರು.
'ಮಾರ್ಚ್ 15ರಿಂದ ಸ್ಪೇಡೆಕ್ಸ್ ಉಪಗ್ರಹಗಳ ಪ್ರತ್ಯೇಕಿಸುವ ಪ್ರಯೋಗ ನಡೆಸಲು ಅವಕಾಶ ಲಭ್ಯವಾಗಲಿದೆ' ಎಂದರು.