ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತ (ಇಸಿ) ಸ್ಥಾನಗಳಿಗೆ 2023ರ ಕಾಯ್ದೆ ಆಧರಿಸಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏ.16ರಂದು ನಡೆಸಲಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಿತು.
ಈ ಪ್ರಕರಣ 2023ರ ಸಂವಿಧಾನ ಪೀಠದ ತೀರ್ಪನ್ನೂ ಒಳಗೊಳ್ಳುವ ಕಾರಣ ತುರ್ತಾಗಿ ವಿಚಾರಣೆಗೆ ಪರಿಗಣಿಸಿ ಎಂದು ವಕೀಲ ಪ್ರಶಾಂತ್ ಭೂಷಣ್ ಇದಕ್ಕೂ ಮುನ್ನ ಕೋರಿದರು.
'ನಿಮ್ಮ ವಾದ ಒಪ್ಪುತ್ತೇವೆ. ತುರ್ತು ವಿಚಾರಣೆಯ ಹಲವು ಅರ್ಜಿಗಳು ನಿತ್ಯವೂ ಇರುತ್ತವೆ. ಈ ಅರ್ಜಿಗಳನ್ನು ಏ.16ರಂದು ವಿಚಾರಣೆಗೆ ಪರಿಗಣಿಸುತ್ತೇವೆ' ಎಂದು ನ್ಯಾಯಮೂರ್ತಿ ತಿಳಿಸಿದರು.
ಸಿಇಸಿ ಆಗಿ ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಫೆ.17ರಂದು ನೇಮಿಸಿತ್ತು. ಹೊಸ ಕಾಯ್ದೆ ಜಾರಿಯಾದ ಬಳಿಕ ಇದು ಮೊದಲ ನೇಮಕವಾಗಿದ್ದು ಇವರ ಅವಧಿ ಜನವರಿ 26, 2029ರವರೆಗೂ ಇದೆ.