ಸುಕ್ಮಾ : ಛತ್ತೀಸಗಢದ ಕೇರ್ಲಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ನಕ್ಸಲರ ವಿರುದ್ಧ ಬಿಎಸ್‌ಎಫ್ ಹಾಗೂ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಇಂದು (ಶನಿವಾರ) ಜಂಟಿ ಕಾರ್ಯಾಚರಣೆ ನಡೆಸಿದ್ದು, ಎನ್‌ಕೌಂಟರ್‌ನಲ್ಲಿ ಒಟ್ಟು 16 ನಕ್ಸಲರು ಮೃತಪಟ್ಟಿದ್ದಾರೆ.
ಕೇರ್ಲಾಪಾಲ್ ಪ್ರದೇಶದ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಎನ್‌ಕೌಂಟರ್ ನಡೆದಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
'ಖಚಿತ ಮಾಹಿತಿ ಆಧರಿಸಿ, ಬಿಎಸ್‌ಎಫ್ ಹಾಗೂ ಜಿಲ್ಲಾ ಮೀಸಲು ಪಡೆಯ (ಡಿಆರ್‌ಜಿ) ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸ್ಥಳದಿಂದ 16 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಶೋಧ ಮುಂದುವರಿದಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.