HEALTH TIPS

ಪ್ರಬಲ ಭೂಕಂಪಕ್ಕೆ ಮ್ಯಾನ್ಮಾರ್, ಥೈಲ್ಯಾಂಡ್ ತತ್ತರ; ಕನಿಷ್ಠ 186 ಮಂದಿ ಮೃತ್ಯು

ಬ್ಯಾಂಕಾಕ್: ಮ್ಯಾನ್ಮಾರ್ ಹಾಗೂ ನೆರೆಯ ರಾಷ್ಟ್ರ ಥೈಲ್ಯಾಂಡ್‌ನಲ್ಲಿ ಶುಕ್ರವಾರ ಸಂಭವಿಸಿದ ಸರಣಿ ಭೂಕಂಪಗಳಲ್ಲಿ ಕನಿಷ್ಠ 186 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ 12:50ರ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯನ್ನು ದಾಖಲಿಸಿದೆ.

ಆನಂತರ ಹಲವು ಪಶ್ಚಾತ್ ಕಂಪನಗಳು ಸಂಭವಿಸಿದ್ದು, ವ್ಯಾಪಕ ನಾಶ, ನಷ್ಟವನ್ನುಂಟು ಮಾಡಿವೆ.

ಥೈಲ್ಯಾಂಡ್‌ನ ಬ್ಯಾಂಕಾಕ್ ಜಿಲ್ಲೆಯ ಚಾಟುಚಾಕ್ ಜಿಲ್ಲೆಯಲ್ಲಿ ಗಗನಚುಂಬಿ ಕಟ್ಟಡವೊಂದು ಕುಸಿದುಬಿದ್ದಿದ್ದು , ಹಲವಾರು ಮಂದಿ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ಕನಿಷ್ಠ ಮೂರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆಯೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್‌ನ ಸಾಗಾಯಿಂಗ್‌ನ ವಾಯುವ್ಯಕ್ಕೆ ಭೂಮಿಯಿಂದ 10ರಿಂದ 30 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತೆಂದು ಅಮೆರಿಕದ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.

ಮ್ಯಾನ್ಮಾರ್‌ನಲ್ಲಿ ಮಸೀದಿಯೊಂದು ಭಾಗಶಃ ಕುಸಿದು ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಕೇಂದ್ರೀಯ ವಿವಿ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಮಾಂಡಲಾಯ್‌ನಲ್ಲಿರುವ 90 ವರ್ಷಗಳಷ್ಟು ಹಳೆಯದಾದ ಆವಾ ಸೇತುವೆಯು ಕುಸಿದುಬಿದ್ದು ಇರ್ರಾವಡ್ಡಿ ನದಿಯಲ್ಲಿ ಕೊಚ್ಚಿ ಹೋಗಿದೆ.

7.7 ರಿಕ್ಟರ್ ತೀವ್ರತೆಯ ಮೊದಲ ಭೂಕಂಪವು ಶುಕ್ರವಾರ 12:50ರ ವೇಳೆಗೆ ಕೇಂದ್ರ ಮ್ಯಾನ್ಮಾರ್ ಪ್ರದೇಶದಲ್ಲಿ ಸಂಭವಿಸಿತು. ಆನಂತರ ಪಶ್ಚಾತ್ ಕಂಪನಗಳು ಥೈಲ್ಯಾಂಡ್, ಚೀನಾ, ಭಾರತ, ವಿಯೆಟ್ನಾಂ ಹಾಗೂ ಬಾಂಗ್ಲಾದೇಶಗಳ ವಿವಿಧೆಡೆ ಸಂಭವಿಸಿವೆ. ಮ್ಯಾನ್ಮಾರ್ ರಾಜಧಾನಿ ನೆಪಿಯಾಡಾವ್‌ನಲ್ಲಿ ಭೂಕಂಪವು ತೀವ್ರ ಹಾನಿಯನ್ನುಂಟು ಮಾಡಿದೆ. ಅಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ.

ಮ್ಯಾನ್ಮಾರ್ ಜುಂಟಾ (ಸೇನಾಡಳಿತ)ದ ವರಿಷ್ಠ ಮಿನ್ ಆಂಗ್ ಹಿಲೆಯಿಂಗ್ ತುರ್ತು ಸ್ಥಿತಿ ಘೋಷಿಸಿದ್ದು, ನೆರವಿಗಾಗಿ ಹೊರದೇಶಗಳಿಗೆ ಮನವಿ ಮಾಡಿದ್ದಾರೆ.

ಭೂಕಂಪದ ಬಳಿಕ ಮಂಡಲಾಯ್‌ನಲ್ಲಿ ಕುಸಿದುಬಿದ್ದಿರುವ ಹಲವಾರು ಬೌದ್ಧಧಾರ್ಮಿಕ ಮಂದಿರಗಳು, ಕಟ್ಟಡಗ ಅವಶೇಷಗಳ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿವೆ.

ಬ್ಯಾಂಕಾಂಕ್‌ನಲ್ಲಿ ಭೂಮಿ ನಡುಗಿನದ ಅನುಭವವಾಗುತ್ತಲೇ ಭಯಭೀತರಾದ ಜನರು ರಸ್ತೆಗಳಿಗೆ ಧಾವಿಸಿದರು. ಬ್ಯಾಂಕಾಂಕ್‌ನಲ್ಲಿ ಭೂಕಂಪದ ಬಳಿಕ ಹಲವಾರು ಕಟ್ಟಡಗಳಿಂದ ಜನರನ್ನು ತೆರವುಗೊಳಿಸಲಾಯಿತು ಹಾಗೂ ಅಂಗಡಿಮುಂಗಟ್ಟೆಗಳು ಮುಚ್ಚಿದ್ದವು. ಆದರೆ ರಾಜಧಾನಿ ಬ್ಯಾಂಕಾಕ್‌ನಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಭೂಕಂಪದ ಬಳಿಕ ಥೈಲ್ಯಾಂಡ್ ಸರಕಾರ ತುರ್ತುಸ್ಥಿತಿಯನ್ನು ಘೋಷಿಸಿದೆ ಮತ್ತು ಮೆಟ್ರೋ, ರೈಲು ಸೇವೆಗಳನ್ನು ಸ್ಥಗಿತಗೊಳಿಸಿದೆ.

ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್‌ನಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ತನ್ನ ತುರ್ತುಸೇವಾ ಘಟಕಗಳನ್ನು ರವಾನಿಸಿದೆ. ಆಂತರಿಕ ಸಂಘರ್ಷ ನಡೆಯುತ್ತಿರುವ ಮ್ಯಾನ್ಮಾರ್‌ನಲ್ಲಿ ನೆರವು ಪೂರೈಕೆ ಕಠಿಣವಾಗಿರುವುದರಿಂದ ಭೂಕಂಪ ಬಾಧಿತ ಪ್ರದೇಶಗಳನ್ನ ತಲುಪಲು ಸಹಕಾರ ನೀಡುವಂತೆ ಡಬ್ಲ್ಯುಎಚ್‌ಓ ವಿವಿಧ ಸಂಘಟನೆಗಳನ್ನು ಕೋರಿದೆ.

ಬಾಂಗ್ಲಾ, ಚೀನಾದ ಗಡಿಗಳಲ್ಲಿ ಭೂಮಿ ಕಂಪಿಸಿದ ಅನುಭವ:

ಢಾಕಾ ಹಾಗೂ ಚಟ್ಟೋಗ್ರಾಂ ಸೇರಿದಂತೆ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿಯೂ ಭೂಮಿಕಂಪಿಸಿದ ಅನುಭವವಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ. ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿರುವ ಆಗ್ನೇಯ ಚೀನಾದ ಯುನಾನ್ ಪ್ರಾಂತದಲ್ಲಿಯೂ ಭೂಮಿಕಂಪಿಸಿದೆಯಾದರೂ, ಯಾವುದೇ ಸಾವುನೋವು ವರದಿಯಾಗಿಲ್ಲ.

ಈಶಾನ್ಯ ಭಾರತದಲ್ಲಿ ಲಘುಭೂಕಂಪ:

ಭಾರತದ ಕೋಲ್ಕತಾ, ಇಂಫಾಲ ಹಾಗೂ ಮೇಘಾಲಯದ ಪೂರ್ವ ಘರೋ ಹಿಲ್ಸ್ ಜಿಲ್ಲೆಯಲ್ಲಿಯೂ ಲಘ ಭೂಕಂಪನ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿ, ಆಸ್ತಿನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ನೆರವಿಗೆ ಭಾರತ ಸಿದ್ಧ: ಪ್ರಧಾನಿ ಮೋದಿ

ಮ್ಯಾನ್ಮಾರ್, ಥೈಲ್ಯಾಂಡ್‌ನಲ್ಲಿ ಶುಕ್ರವಾರ ವಿನಾಶಕಾರಿ ಭೂಕಂಪ ಸಂಭವಿಸಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭೂಕಂಪದಿಂದ ಬಾಧಿತವಾದ ಈ ಎರಡೂ ದೇಶಗಳಿಗೆ ಸಾಧ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಭಾರತವು ಸಿದ್ಧವಿದೆಯೆಂದು ಅವರು ಹೇಳಿದರು. ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳ ಸರಕಾರದೊಂದಿಗೆ ಸಂಪರ್ಕದಲ್ಲಿರುವಂತೆ ಪ್ರಧಾನಿ ಮೋದಿ ಅವರು ವಿದೇಶಾಂಗ ಇಲಾಖೆಗೆ ಸೂಚನೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries