ಕಾಸರಗೋಡು: ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಕೆಲಸ ನಡೆಸುವ ಮಧ್ಯೆ ತೋಟದಲ್ಲಿ ಮಣ್ಣಿನಡಿ ಅವಿತಿರಿಸಿದ್ದ 18 ಬಾಟಲಿ ಸಾರಾಯಿ ಪತ್ತೆಹಚ್ಚಿ, ಇದನ್ನು ಮಣ್ಣಿಗೆ ಚೆಲ್ಲಿ ನಾಶಗೊಳಿಸಿದ್ದಾರೆ. ಪಡನ್ನ ಪಂಚಾಯಿತಿಯ ಕಾಂತಲೋಟ್ ಎಂಬಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಹಿಳಾ ಕಾರ್ಮಿಕರು ಕೆಲಸ ನಿರ್ವಹಿಸುವ ಮಧ್ಯೆ ಅನಧಿಕೃತ ಮದ್ಯ ತಯಾರಿ ದಂಧೆ ನಡೆಸುತ್ತಿರುವವರು ದಾಸ್ತಾನಿರಿಸದ್ದರೆನ್ನಲಾದ ಮದ್ಯ ಕಂಡು ಬಂದಿತ್ತು. ಈ ಬಗ್ಗೆ ನೀಡಿದ ಮಾಹಿತಿಯನ್ವಯ ಪಂಚಾಯಿತಿ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ್ದರು. ಸಾಮೂಹಿಕ ಸನ್ನಿಯಾಗಿರುವ ಅನಧಿಕೃತ ಮದ್ಯ ಹಾಗೂ ಮಾದಕ ಪದಾರ್ಥಗಳ ವಿರುದ್ಧ ಹೋರಾಟ ನಡೆಸುವ ಪಣತೊಟ್ಟಿರುವ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಪೊಲೀಸರ ಉಪಸ್ಥಿತಿಯಲ್ಲಿ, ಬಾಟಲಿಯಲ್ಲಿದ್ದ ಮದ್ಯ ಮಣ್ಣಿಗೆ ಸುರಿದು ಮದ್ಯ-ಮಾದಕ ಮದಾರ್ಥ ವಿರುದ್ಧದ ತಮ್ಮ ಹೋರಾಟದ ಬಗ್ಗೆ ಸಮಾಜಕ್ಕೆ ಸಂದೇಶ ಸಾರಿದ್ದರೆ.