ಮುಂಬೈ: ನಾಗ್ಪುರ ಹಿಂಸಾಚಾರದಲ್ಲಿ ಭಾಗಿಯಾಗಿದವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು 18 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ನಡೆದ ದಿನ ಸೋಮವಾರದಿಂದ ಇಲ್ಲಿಯವರೆಗೆ 69 ಜನರನ್ನು ಬಂಧಿಸಲಾಗಿದೆ. ನಾಲ್ಕನೇ ದಿನವಾದ ಗುರುವಾರವೂ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿದಿದೆ.
ಪೊಲೀಸರು ಇಲ್ಲಿಯವರೆಗೆ 200 ಆರೋಪಿಗಳನ್ನು ಗುರುತಿಸಿದ್ದು, ಸಿಸಿಟಿವಿ ದೃಶ್ಯಗಳ ಸಹಾಯದಿಂದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಸೋಮವಾರ, ಗಣೇಶಪೇಟೆ ಮತ್ತು ಕೊತ್ವಾಲಿ ಪೊಲೀಸ್ ಠಾಣೆಗಳಲ್ಲಿ ಐದು ಎಫ್‌ಐಆರ್ ದಾಖಲಾಗಿದ್ದು, ಇದರಲ್ಲಿ 200 ಆರೋಪಿಗಳನ್ನು ಹೆಸರಿಸಲಾಗಿದೆ.
ನಾಗ್ಪುರ ಪೊಲೀಸ್ ಆಯುಕ್ತ ಡಾ. ರವೀಂದರ್ ಕುಮಾರ್ ಸಿಂಘಾಲ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ವಿಶೇಷ ತಂಡಗಳಲ್ಲಿ ಗಣೇಶಪೇಟೆ, ಕೊತ್ವಾಲಿ ಮತ್ತು ತಹಸಿಲ್ ಪೊಲೀಸ್ ಠಾಣೆಗಳ ಸಿಬ್ಬಂದಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಸೇರಿದ್ದಾರೆ' ಎಂದು ಹೇಳಿದ್ದರು.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕೋರಿ ವಿಎಚ್‌ಪಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ 'ಚಾದರ್' ಸುಟ್ಟು ಹಾಕಲಾಗಿದೆ ಎಂಬ ವದಂತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತು.