ನವದೆಹಲಿ: ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಿಸುವ ಕುರಿತು ಚರ್ಚಿಸುವ ಸಂಬಂಧ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ಇದೇ 18ರಂದು ಸಭೆ ಕರೆದಿದ್ದಾರೆ.
ಗೃಹ ಸಚಿವಾಲಯ ಕಾರ್ಯದರ್ಶಿ ಗೋವಿಂದ ಮೋಹನ್, ಶಾಸಕಾಂಗ ಇಲಾಖೆ ಕಾರ್ಯದರ್ಶಿ ರಾಜೀವ್ ಮಣಿ ಹಾಗೂ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಸಿಇಒ ಭುವನೇಶ ಕುಮಾರ್ ಅವರು ಕೂಡ ಸಭೆಯಲ್ಲಿ ಪಾಲ್ಗೊಳ್ಳುವರು.
ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ ಹಾಗೂ ಒಂದೇ ರೀತಿಯ ಸಂಖ್ಯೆವುಳ್ಳ ಮತದಾರರ ಗುರುತಿನ ಚೀಟಿಗಳ ಕುರಿತು ವ್ಯಾಪಕ ದೂರುಗಳು ಕೇಳಿ ಬಂದಿರುವ ಕಾರಣ, ಚುನಾವಣಾ ಆಯೋಗವು ಈ ಸಭೆ ಆಯೋಜಿಸಿದೆ ಎಂದು ಮೂಲಗಳು ಹೇಳಿವೆ.
ಸದ್ಯದ ಕಾನೂನು ಪ್ರಕಾರ, ಮತದಾರರು ಸ್ವ ಇಚ್ಛೆಯಿಂದ ಮಾತ್ರ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಬಹುದಾಗಿದೆ.
'ನಿಗಾ ಇಡುತ್ತೇವೆ'
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸಭೆ ಕರೆದಿರುವ ಕುರಿತು ರಾಜ್ಯಸಭೆಯಲ್ಲಿನ ಟಿಎಂಸಿ ಉಪನಾಯಕಿ ಸಾಗರಿಕಾ ಘೋಷ್ ಪ್ರತಿಕ್ರಿಯಿಸಿದ್ದು, 'ತಮ್ಮ ಮಾನ ಉಳಿಸುವಕೊಳ್ಳುವ ಉದ್ದೇಶದಿಂದ ಅವರು ಈ ಸಭೆ ಕರೆದಿದ್ದಾರೆ' ಎಂದು ಹೇಳಿದ್ದಾರೆ.
'ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಆರೋಪಗಳ ಕುರಿತು ಚುನಾವಣಾ ಆಯೋಗವು ಈ ವರೆಗೆ ಮೂರು ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಈಗ ಸಭೆ ಕರೆದಿದೆ. ಮುಂಬರುವ ಚುನಾವಣೆಗಳು ಮುಗಿಯುವವರೆಗೆ ನಾವು ನಿಗಾ ವಹಿಸುತ್ತೇವೆ' ಎಂದೂ ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಸಲಹೆಗಳನ್ನು ನೀಡುವಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳನ್ನು ಕೋರಿರುವ ಆಯೋಗ, ಪರಸ್ಪರರಿಗೆ ಅನುಕೂಲವಾಗುವ ದಿನಾಂಕದಂದು ಸಭೆ ನಡೆಸುವುದಾಗಿ ಇತ್ತೀಚೆಗೆ ಹೇಳಿತ್ತು.