ನವದೆಹಲಿ: ವಿದ್ಯಾರ್ಥಿನಿಯೊಬ್ಬಳ ಮೇಲೆ 1984ರಲ್ಲಿ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಸಂತ್ರಸ್ತೆಯ ಗುಪ್ತಾಂಗಗಳ ಮೇಲೆ ಗಾಯಗಳು ಇರಲಿಲ್ಲ ಎಂಬುದು ಪ್ರಾಸಿಕ್ಯೂಷನ್ ವಾದವನ್ನು ತಳ್ಳಿಹಾಕುವುದಕ್ಕೆ ಕಾರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಂತ್ರಸ್ತೆಯು ಒದಗಿಸಿದ್ದ ಸಾಕ್ಷ್ಯವು 'ಪೂರ್ತಿಯಾಗಿ ನಂಬಬಹುದಾದುದು, ವಿಶ್ವಾಸ ಮೂಡಿಸುವಂಥದ್ದು' ಎಂದು ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಪ್ರಸನ್ನ ಬಿ. ವರಾಳೆ ಅವರು ಇರುವ ವಿಭಾಗೀಯ ಪೀಠ ಹೇಳಿದೆ.
ಲೋಕ್ ಮಾಲ್ ಅಲಿಯಾಸ್ ಲೋಕು ಎನ್ನುವವ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿ ಆತನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯವು 1986ರ ಆಗಸ್ಟ್‌ನಲ್ಲಿ ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು 2010ರ ಜುಲೈನಲ್ಲಿ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಬೇಕಾದ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿದ್ಯಾರ್ಥಿನಿಯು ಲೋಕುವಿನ ಮನೆಗೆ ಮನೆಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದಳು. ಈತ 1984ರ ಮಾರ್ಚ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.
ಲೋಕುವಿನ ಮೇಲೆ ತಪ್ಪಾಗಿ ಆರೋಪ ಹೊರಿಸಲಾಗಿದೆ. ಪ್ರಾಸಿಕ್ಯೂಷನ್ ವಕೀಲರು ಹೇಳಿರುವುದಕ್ಕೆ ವೈದ್ಯಕೀಯ ದಾಖಲೆಗಳು ಪೂರಕವಾಗಿಲ್ಲ. ಸಂತ್ರಸ್ತೆಯ ಗುಪ್ತಾಂಗಗಳ ಮೇಲೆ ಗಾಯಗಳು ಇಲ್ಲ ಎಂದು ಆರೋಪಿಯ ಪರ ವಕೀಲರು ವಾದಿಸಿದ್ದರು.