ನವದೆಹಲಿ: ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಏಪ್ರಿಲ್ 1 ರಿಂದ ಅವರು 5 ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಅಧ್ಯಕ್ಷರಾದ ಬಳಿಕ ಬೋರಿಕ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.
ಬೋರಿಕ್ ಅವರೊಂದಿಗೆ ಸಚಿವರು, ಸಂಸತ್ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಭಾರತಕ್ಕೆ ಬರಲಿದೆ.
ಏಪ್ರಿಲ್ 1 ರಂದು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭಾರತ- ಚಿಲಿ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಭೇಟಿ ನೀಡುವ ಗಣ್ಯರಿಗೆ ಗೌರವಾರ್ಥವಾಗಿ ಮೋದಿ ಅವರು ಭೋಜನ ಕೂಟವನ್ನು ಆಯೋಜಿಸಲಿದ್ದಾರೆ. ಬಳಿಕ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಮುರ್ಮು ಅವರು ಸಹ ಔತಣಕೂಟವನ್ನು ಆಯೋಜಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 5ರಂದು ಚಿಲಿಗೆ ಹಿಂತಿರುಗುವ ಮೊದಲು ಅವರು, ದೆಹಲಿ ಅಲ್ಲದೇ ಆಗ್ರಾ, ಮುಂಬೈ ಮತ್ತು ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ.