ಶ್ರೀನಗರ: ಕಳೆದ ಎರಡು ವರ್ಷಗಳಲ್ಲಿ 1.20 ಲಕ್ಷ ವಿದೇಶಿಯರು ಸೇರಿದಂತೆ ಸುಮಾರು 4.40 ಕೋಟಿ ಪ್ರವಾಸಿಗರು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು (ಮಂಗಳವಾರ) ವಿಧಾನಸಭೆಗೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸದಸ್ಯ ಮುಬಾರಕ್ ಗುಲ್ ಅವರ ಪ್ರಶ್ನೆಗೆ ಉತ್ತರಿಸಿದ ಒಮರ್, 'ಕಳೆದ ಎರಡು ವರ್ಷಗಳಲ್ಲಿ 1.20 ಲಕ್ಷ ವಿದೇಶಿಯರು ಸೇರಿದಂತೆ 4.48 ಕೋಟಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. 2023 ರಲ್ಲಿ 2,11,24,674 ಮತ್ತು 2024 ರಲ್ಲಿ 2,35,24,629 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ 2023ರಲ್ಲಿ 55,337 ಮತ್ತು 2024ರಲ್ಲಿ 65,452 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ' ಎಂದು ವಿವರಿಸಿದ್ದಾರೆ.
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಚಾರ, ಜಾಹೀರಾತು ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ ₹35.08 ಕೋಟಿ ಅನುದಾನ ನೀಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೇರಳ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.