ನವಸಾರಿ: ಕೇಂದ್ರದಲ್ಲಿ ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಮಹಿಳೆಯರ ಹಕ್ಕುಗಳು ಮತ್ತು ಹೊಸ ಅವಕಾಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಸಬಲೀಕರಣ ಹೆಚ್ಚು ಮಹತ್ವದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಗುಜರಾತ್‌ನ ನವಸಾರಿಯಲ್ಲಿ G-SAFAL ಮತ್ತು G-MAITRI ಸೇರಿದಂತೆ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2014ರಿಂದ ದೇಶದಲ್ಲಿ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
'ದೇಶದಲ್ಲಿ ಸಂಸತ್ ಭವನದ ಹೊಸ ಕಟ್ಟಡ ಉದ್ಘಾಟನೆಯಾದ ಸಂದರ್ಭದಲ್ಲಿ ಅಂಗೀಕರಿಸಲಾದ ಮೊದಲ ಮಸೂದೆಯೇ 'ನಾರಿ ಶಕ್ತಿ'ಗೆ ಸಂಬಂಧಿಸಿದ್ದಾಗಿದೆ. ಬುಡಕಟ್ಟು ಹಿನ್ನೆಲೆಯುಳ್ಳ ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆ ಮಸೂದೆಗೆ ಸಹಿ ಹಾಕಿದ್ದು, ಮತ್ತಷ್ಟು ವಿಶೇಷತೆಯಾಗಿತ್ತು' ಎಂದು ಮೋದಿ ತಿಳಿಸಿದ್ದಾರೆ.
'ಗ್ರಾಮೀಣ ಸಂಸ್ಕೃತಿ ಭಾರತದ ಆತ್ಮ' ಎಂದು ಗಾಂಧೀಜಿ ಹೇಳುತ್ತಿದ್ದರು. ಈಗ ಭಾರತದ ಆತ್ಮ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿದೆ ಎಂದು ನಾನು ಹೇಳುತ್ತಿದ್ದೇನೆ. ಅದಕ್ಕಾಗಿಯೇ ನಮ್ಮ ಸರ್ಕಾರ ಮಹಿಳೆಯರ ಹಕ್ಕುಗಳು ಮತ್ತು ಹೊಸ ಅವಕಾಶಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ರಾಜಕೀಯ, ಕ್ರೀಡೆ, ನ್ಯಾಯಾಂಗ, ಪೊಲೀಸ್ ಯಾವುದೇ ಆಗಿರಲಿ ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಮುನ್ನಡೆ ಸಾಧಿಸುತ್ತಿದ್ದಾರೆ. 2014ರಿಂದ ಕೇಂದ್ರ ಸರ್ಕಾರದಲ್ಲಿ ಅತಿ ಹೆಚ್ಚು ಮಹಿಳೆಯರು ಸಚಿವರಾಗಿದ್ದಾರೆ. ಸಂಸತ್ತಿನಲ್ಲಿಯೂ ಮಹಿಳೆಯರ ಉಪಸ್ಥಿತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದೂ ಹೇಳಿದ್ದಾರೆ.