ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ವಲಸೆ ಮತ್ತು ವಿದೇಶಿಗರ ಮಸೂದೆ 2025 ಧ್ವನಿಮತದ ಮೂಲಕ ಗುರುವಾರ ಅಂಗೀಕಾರಗೊಂಡಿತು.
ಮಸೂದೆ ಬಗೆಗಿನ ಚರ್ಚೆಯ ವೇಳೆ ಮಾತನಾಡಿದ ಅವರು, 'ಭಾರತಕ್ಕೆ ವಿದ್ಯಾಭ್ಯಾಸ, ಉದ್ಯಮ, ಹೂಡಿಕೆಗಾಗಿ ಬರುವವರಿಗೆ ಸ್ವಾಗತ, ಆದರೆ ದೇಶದ ಭದ್ರತೆಗೆ ಧಕ್ಕೆ ತರುವವರು ಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ' ಎಂದರು.
ದೇಶದ ಭದ್ರತೆ, ಆರ್ಥಿಕತೆಯನ್ನು ಬಲಪಡಿಸಲು, ಉತ್ಪಾದಕತೆ ಮತ್ತು ವ್ಯಾಪಾರವನ್ನು ಮೇಲ್ದರ್ಜೆಗೇರಿಸಲು, ಶಿಕ್ಷಣ ವ್ಯವಸ್ಥೆಗೆ ಜಾಗತಿಕ ಮನ್ನಣೆ ಸಿಗಲು ಮತ್ತು ವಿಶ್ವವಿದ್ಯಾಲಯಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಧಾನ್ಯತೆ ಸಿಗುವಂತಾಗಲು ಈ ಮಸೂದೆ ಅಗತ್ಯವಾಗಿದೆ ಎಂದು ಶಾ ಪ್ರತಿಪಾದಿಸಿದರು.
'ವಲಸಿಗರ ಸಮಸ್ಯೆ ಕೇವಲ ಒಂದು ವಿಚಾರಕ್ಕೆ ಸಂಬಂಧಿಸಿದ್ದಲ್ಲ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನೇಕ ವಿಚಾರಗಳೊಂದಿಗೆ ನಂಟು ಹೊಂದಿದೆ. ಈ ಮಸೂದೆ ಭಾರತಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿಗರ ಮೇಲ್ವಿಚಾರಣೆಯನ್ನು ಮಾಡುತ್ತದೆ. ಅಲ್ಲದೆ ಅವರು ಭಾರತಕ್ಕೆ ಯಾವ ಕಾರಣಕ್ಕೆ ಬಂದಿದ್ದಾರೆ, ಎಷ್ಟು ಕಾಲ ನೆಲೆಸಲಿದ್ದಾರೆ ಎನ್ನುವ ಮಾಹಿತಿಯನ್ನು ಸಂಗ್ರಹಿಸಲು ನೆರವಾಗುತ್ತದೆ. ಪ್ರತಿಯೊಬ್ಬ ವಿದೇಶಿಗ ಭಾರತಕ್ಕೆ ಯಾವ ಕಾರಣಕ್ಕೆ ಬಂದಿದ್ದಾನೆ ಎನ್ನುವುದನ್ನು ತಿಳಿಯುವುದು ಅತ್ಯಗತ್ಯವಾಗಿದೆ' ಎಂದು ಶಾ ಅಭಿಪ್ರಾಯಪಟ್ಟರು.