ಬದಿಯಡ್ಕ: ಕೇಂದ್ರ ಸರ್ಕಾರದ ಅಂಗೀಕಾರ ಇರುವ ಸಂಘಟನೆಯಾದ ‘ಯೋಗಾಸನ ಭಾರತ’ ಇದರ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಮೇ 24 ಮತ್ತು 25 ರಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯಲಿರುವ ಕಾಸರಗೋಡು ಜಿಲ್ಲಾ ಯೋಗ ಉತ್ಸವ 2025 ರ ಕರಪತ್ರವನ್ನು ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಇತ್ತೀಚೆಗೆ ಬಿಡುಗಡೆಗೊಳಿಸಿದರು. ಯೋಗಾಸನ ಕಾಸರಗೋಡು ಸಂಸ್ಥೆಯ ಜಿಲ್ಲಾ ಅಧ್ಯಕ್ಷ ರವಿಶಂಕರ್ ನೆಗಳಗುಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರಿನ ಪ್ರತಿಷ್ಠಿತ ಯೋಗ ಸಂಸ್ಥೆ ದೇಲಂಪಾಡಿ ಯೋಗ ಪ್ರತಿಷ್ಠಾನ ಮತ್ತು ಕಾಸರಗೋಡಿನ ಯೋಗ ಪೋರ್ ಕಿಡ್ಸ್ ಇವರ ಸಹಯೋಗದಲ್ಲಿ ಈ ಉತ್ಸವ ನಡೆಯಲಿದೆ.
ಯೋಗ ಉತ್ಸವದ ಅಂಗವಾಗಿ ಯೋಗ, ರಸಪ್ರಶ್ನೆ, ಚಿತ್ರ ರಚನೆ ಸ್ಪರ್ಧೆ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪಾಕ ತಜ್ಞರಿಂದ ಆಹಾರ ಮೇಳ, ಚಿತ್ರ ಪ್ರದರ್ಶನ, ಪುಸ್ತಕ ಮೇಳ ಹಾಗೂ ಮಕ್ಕಳಿಗಾಗಿ ಆಸಕ್ತಿದಾಯಕ ಕ್ರೀಡಾ ಜಗತ್ತು ಆಯೋಜಿಸಲಾಗಿದೆ. ದೇಶ ವಿದೇಶದ ಅನೇಕ ಯೋಗಪಟುಗಳು ಉತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯೋಗಾಸನ ಕಾಸರಗೋಡು ಸಂಸ್ಥೆಯ ಉಪಾಧ್ಯಕ್ಷೆ ಡಾ. ಸುಪ್ರಿಯಾ ಕೇಶವ್ ಸ್ವಾಗತಿಸಿ ಪುರುμÉೂೀತ್ತಮ ಕಾಸರಗೋಡು ವಂದಿಸಿದರು. ಪ್ರತಿನಿಧಿಗಳಾದ ವಿನಯ್ ಪಾಲ್, ಕವಿತಾ, ದಿವ್ಯ ಶರ್ಮ, ಡಾ. ಶೈನಾ ರಾಜೇಶ್, ವಿಜಯನ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ ಯೋಗಾಸನ ಕಾಸರಗೋಡಿನ ಜಿಲ್ಲಾ ಪದಾಧಿಕಾರಿಗಳನ್ನು 9995541436, 9446774845 ಎಂಬ ದೂರವಾಣಿಯ ಮೂಲಕ ಸಂಪರ್ಕಿಸಲು ಸೂಚಿಸಲಾಗಿದೆ.