ಚೆನ್ನೈ,: ಆಂಧ್ರಪ್ರದೇಶದ ಹೊರಗೆ ಇಸ್ರೊಗೆ ಎರಡನೇ ಉಡ್ಡಯನ ಸಂಕೀರ್ಣವಾದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂ ಬಾಹ್ಯಾಕಾಶ ನಿಲ್ದಾಣವು 24 ತಿಂಗಳಲ್ಲಿ ಸಣ್ಣ ಉಪಗ್ರಹ ಉಡ್ಡಯನ ವಾಹನಕ್ಕೆ(ಎಸ್‌ಎಸ್‌ಎಲ್‌ವಿ) ಸಾಕ್ಷಿಯಾಗಲಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಿ.ನಾರಾಯಣನ್ ಸೋಮವಾರ ತಿಳಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಎಸ್‌ಎಸ್‌ಎಲ್‌ವಿ ಪ್ರಾಥಮಿಕವಾಗಿ 500 ಕೆ.ಜಿ. ವರೆಗಿನ ಧ್ರುವೀಯ ಉಡ್ಡಯನಗಳನ್ನು ಬೆಂಬಲಿಸುತ್ತದೆ. ಅದರ ಉತ್ಪಾದನೆಯಲ್ಲಿ ಭಾರತೀಯ ಉದ್ಯಮವು ತೊಡಗಿಸಿಕೊಂಡಿದೆ.
'24 ತಿಂಗಳಲ್ಲಿ ಉಡ್ಡಯನಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಿಯೋಜಿಸಲಾಗುವುದು. ಮೊದಲ ಉಡ್ಡಯನವು ಎರಡು ವರ್ಷಗಳಲ್ಲಿ ನಡೆಯಲಿದೆ. ಇದು ಗಾತ್ರದಲ್ಲಿ ಅಕ್ಷರಶಃ ಚಿಕ್ಕದಾಗಿರುತ್ತದೆ ಎಂದು ಭಾವಿಸಬೇಡಿ. ಇದು 500 ಕೆ.ಜಿ ತೂಕದ ಉಪಗ್ರಹವಾಗಿರುತ್ತದೆ' ಎಂದು ನಾರಾಯಣನ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಐಐಟಿ-ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಂಡ ಈ ಕೇಂದ್ರವು 'ಆತ್ಮನಿರ್ಭರ ಭಾರತ' ಉಪಕ್ರಮಗಳನ್ನು ಬೆಂಬಲಿಸುತ್ತದೆ. ಇದು ಮುಂದುವರಿದ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ ಮತ್ತು ಜಾಗತಿಕ ಪ್ರತಿಭೆ ಹಾಗೂ ಸಂಶೋಧನಾ ನಿಧಿಯನ್ನು ಆಕರ್ಷಿಸುತ್ತದೆ.
'ಇದು ಭಾರತವನ್ನು ಬಾಹ್ಯಾಕಾಶ ಸಂಬಂಧಿತ ಉಷ್ಣ ವಿಜ್ಞಾನ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿ ಇರಿಸುತ್ತದೆ'ಎಂದು ಐಐಟಿ ಮದ್ರಾಸ್ ಹೇಳಿದೆ.
ದೇಶದ ಅಭಿವೃದ್ಧಿಗೆ ಕೇಂದ್ರವು ಅಪಾರ ಕೊಡುಗೆ ನೀಡುತ್ತದೆ ಎಂದು ನಾರಾಯಣನ್ ಹೇಳಿದ್ದಾರೆ.
'ಅದು ರಾಕೆಟ್ ಉಡಾವಣಾ ವಾಹನವಾಗಲಿ ಅಥವಾ ಉಪಗ್ರಹವಾಗಲಿ, ಉಷ್ಣ ಮತ್ತು ದ್ರವ ಹರಿವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ಉತ್ಪತ್ತಿಯಾಗುವ ಶಾಖ ಅಥವಾ ಉಷ್ಣ ಶಕ್ತಿಯನ್ನು ಹೇಗೆ ನಿರ್ವಹಿಸುವುದು ಎಂಬುದರಲ್ಲಿ ಅವುಗಳ ಪಾತ್ರ ಮುಖ್ಯವಾಗುತ್ತದೆ'ಎಂದು ನಾರಾಯಣನ್ ಹೇಳಿದ್ದಾರೆ.