ಪಣಜಿ: ಗೋವಾ ಮತ್ತು ಗುಜರಾತ್‌ನಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಆತಿಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ಈಗಿನಿಂದಲೇ ಎರಡೂ ರಾಜ್ಯಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಯಾರಿ ಆರಂಭಿಸಿದ್ದೇವೆ.
ಈವರೆಗೆ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಬಗ್ಗೆ ಮಾತುಕತೆ ನಡೆದಿಲ್ಲ. 2022ರಲ್ಲಿ ಗೋವಾ ಜನ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದ್ದರು. ಆದರೆ ಅದೇ ವೇಳೆ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆದ್ದಿತ್ತು. ಆ ಬಳಿಕ 8 ಕಾಂಗ್ರೆಸ್ ಶಾಸಕರು ಕೇಸರಿ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಮೂವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪ್ರಮುಖ ವಿರೊಧ ಪಕ್ಷವಾಗಿದೆ' ಎಂದರು.
'2022ರಲ್ಲಿ ಗೋವಾದಲ್ಲಿ ಇಬ್ಬರು ಎಎಪಿ ಶಾಸಕರು ಗೆಲುವು ಸಾಧಿಸಿದ್ದರು, ಅವರು ಇನ್ನೂ ಪಕ್ಷದಲ್ಲೇ ಇದ್ದಾರೆ. ಏಕೆಂದರೆ ಅವರು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಬಿಜೆಪಿ ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸಿತ್ತು ಆದರೆ ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಗೆದ್ದು ಹಣ ಮಾಡಿಕೊಳ್ಳುವ ರಾಜಕೀಯ ನಡೆಸಲು ನಮಗೆ ಆಸಕ್ತಿಯಿಲ್ಲ. ಜನರಿಗೋಸ್ಕರ ಕೆಲಸ ಮಾಡುವುದು ನಮ್ಮ ಆಸಕ್ತಿಯಾಗಿದೆ' ಎಂದು ಹೇಳಿದರು.