ನವದೆಹಲಿ: 2047ರ ವೇಳೆಗೆ ಭಾರತವನ್ನು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಭಾರತೀಯರು ಶ್ರಮಿಸಬೇಕು ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿದ ಜಿ20 ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ), ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ದೇಶಗಳು ಬಲಿಷ್ಠವಾದ ಕೆಲಸದ ನೀತಿಯ ಮೂಲಕ ಆರ್ಥಿಕ ಯಶಸ್ಸನ್ನು ಸಾಧಿಸಿವೆ ಮತ್ತು ವಿಶ್ವ ದರ್ಜೆಯ ಆರ್ಥಿಕತೆಯನ್ನು ನಿರ್ಮಿಸಲು ಭಾರತವು ಇದೇ ರೀತಿಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
'ನಾನು ಕಠಿಣ ಪರಿಶ್ರಮದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದೇನೆ. ವಾರಕ್ಕೆ 80 ಗಂಟೆ ಅಥವಾ 90 ಗಂಟೆ ಆಗಿರಲಿ ಭಾರತೀಯರು ಕಷ್ಟಪಟ್ಟು ಕೆಲಸ ಮಾಡಬೇಕು. 4 ಟ್ರಿಲಿಯನ್ ಡಾಲರ್‌ನಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮಹತ್ವಾಕಾಂಕ್ಷೆಯತ್ತ ನೀವು ಸಾಗುವುದಾದರೆ, ನೀವು ಅದನ್ನು ಮನರಂಜನೆಯ ಮೂಲಕ ಅಥವಾ ಕೆಲವು ಚಲನಚಿತ್ರ ತಾರೆಯರ ಅಭಿಪ್ರಾಯಗಳನ್ನು ಅನುಸರಿಸುವ ಮೂಲಕ ಮಾಡಲು ಸಾಧ್ಯವಿಲ್ಲ' ಎಂದು ಅವರು ಬಿಸಿನೆಸ್ ಸ್ಟಾಂಡರ್ಡ್‌ನ ಮಂಥನ್ ಶೃಂಗಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಪ್ರಸ್ತುತ, ಭಾರತದ ಆರ್ಥಿಕತೆಯ ಗಾತ್ರ ಸುಮಾರು 4 ಟ್ರಿಲಿಯನ್ ಡಾಲರ್ ಆಗಿದೆ.
'ನಾವು ಕಷ್ಟಪಟ್ಟು ಕೆಲಸ ಮಾಡದಿರುವ ಬಗ್ಗೆ ಮಾತನಾಡುವುದನ್ನು ಫ್ಯಾಶನ್ ಆಗಿ ಮಾಡಿಕೊಂಡಿದ್ದೇವೆ. ಭಾರತವು ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಲು ಮತ್ತು ಸ್ಪರ್ಧಾತ್ಮಕವಾಗಲು, ಶ್ರದ್ಧೆ ಮತ್ತು ದಕ್ಷತೆಯಿಂದ ಕೆಲಸ ಮಾಡುವತ್ತ ಗಮನಹರಿಸಬೇಕು. ಸಮಯಕ್ಕೆ ಸರಿಯಾಗಿ, ಉತ್ತಮ ಗುಣಮಟ್ಟ ಮತ್ತು ವಿಳಂಬ ಅಥವಾ ಹೆಚ್ಚುವರಿ ವೆಚ್ಚಗಳನ್ನು ತಪ್ಪಿಸುವ ಮೂಲಕ ಯೋಜನೆಗಳನ್ನು ತಲುಪಿಸುವ ಕಲೆಯನ್ನು ಭಾರತೀಯರು ಕಲಿಯಬೇಕು' ಎಂದು ಅವರು ಹೇಳಿದರು.
ವರ್ಕ್-ಲೈಫ್ ಸಮತೋಲನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂತ್, ಶಿಸ್ತುಬದ್ಧ ಕೆಲಸದ ವೇಳಾಪಟ್ಟಿಯಲ್ಲಿ ವೈಯಕ್ತಿಕ ಯೋಗಕ್ಷೇಮಕ್ಕೆ ಸಾಕಷ್ಟು ಸಮಯವಿದೆ ಎಂದು ಒತ್ತಿ ಹೇಳಿದರು.
'ನಾನು ಪ್ರತಿದಿನ ಕೆಲಸ ಮಾಡುತ್ತೇನೆ. ನಾನು ವ್ಯಾಯಾಮ ಮಾಡುತ್ತೇನೆ. ಗಾಲ್ಫ್ ಆಡುತ್ತೇನೆ ಮತ್ತು ನಾನು ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನಿಮಗಾಗಿ ಒಂದೂವರೆ ಗಂಟೆಯನ್ನು ಮೀಸಲಿಡಿ. ನಿಮಗೆ ಇನ್ನೂ ದಿನದಲ್ಲಿ 22.5 ಗಂಟೆ ಇರುತ್ತದೆ. ಕೆಲಸ-ಜೀವನದ ಸಮತೋಲನವನ್ನು ನಿರ್ವಹಿಸಲು ಸಾಕಷ್ಟು ಸಮಯವಿದೆ. ಆದರೆ, ಜನರು ಕಷ್ಟಪಟ್ಟು ಕೆಲಸ ಮಾಡಬಾರದು ಎಂದು ಹೇಳುವುದನ್ನು ಫ್ಯಾಶನ್ ಮಾಡಬೇಡಿ' ಎಂದಿದ್ದಾರೆ.
ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡದೆಯೇ ಭಾರತವು ಮುಂದಿನ ದಿನಗಳಲ್ಲಿ ಶ್ರೇಷ್ಠ ರಾಷ್ಟ್ರವಾಗಬಹುದು ಎಂದು ಭಾರತದ ಯುವ ಪೀಳಿಗೆಗೆ ತಪ್ಪು ಸಂದೇಶಗಳನ್ನು ಕಳುಹಿಸುತ್ತಿದ್ದೇವೆ. ಇಲ್ಲ, ಕಷ್ಟಪಟ್ಟು ಕೆಲಸ ಮಾಡದೆಯೇ ಯಾವುದೇ ದೇಶವು ಇದನ್ನು ಸಾಧಿಸಲು ಸಾಧ್ಯವಾಗಿಲ್ಲ' ಎಂದು ಹೇಳಿದರು.
ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ಇತ್ತೀಚೆಗಷ್ಟೇ, ಸ್ಪರ್ಧಾತ್ಮಕವಾಗಿ ಉಳಿಯಲು ನೌಕರರು ಭಾನುವಾರದಂದು ಸಹ ಕೆಲಸ ಮಾಡಬೇಕು. ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರಗಳಂದು ನಿಮ್ಮನ್ನು ಕೆಲಸಕ್ಕೆ ತೊಡಗಿಸದಿರುವುದಕ್ಕೆ ವಿಷಾದವಿದೆ. ಭಾನುವಾರದಂದೂ ನೀವು ಕೆಲಸ ಮಾಡುವಂತಾದರೆ ಅದು ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಏಕೆಂದರೆ ನಾನೂ ಕೂಡ ಭಾನುವಾರಗಳಂದು ಕೆಲಸ ಮಾಡುತ್ತೇನೆ. ಭಾನುವಾರ ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಎಷ್ಟು ಸಮಯ ನಿಮ್ಮ ಹೆಂಡತಿಯನ್ನೇ ನೋಡುತ್ತಾ ಕುಳಿತಿರುತ್ತೀರಿ? ಹೆಂಡತಿಯರೂ ಅಷ್ಟೇ ಎಷ್ಟು ಅಂತ ಗಂಡನ ಮುಖ ನೋಡುತ್ತಾ ಕುಳಿತಿರಲು ಸಾಧ್ಯ? ಅದರ ಬದಲು ಕಚೇರಿಗೆ ಬಂದು ಕೆಲಸ ಮಾಡಿ ಎಂದು ನೌಕರರಿಗೆ ಕರೆ ನೀಡಿದ್ದರು.