ವಾಷಿಂಗ್ಟನ್: ಇರಾನ್ ಬೆಂಬಲಿತ ಹೂತಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಯೆಮೆನ್ ರಾಜಧಾನಿ ಸನಾ ಮೇಲೆ ಶನಿವಾರ ಅಮೆರಿಕ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೆಂಪು ಸಮುದ್ರದ ಕಾರಿಡಾರ್‌ನಲ್ಲಿ ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೆ ಹೂತಿ ಬಂಡಕೋರರ ಮೇಲೆ ದಾಳಿ ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ನಮ್ಮ ವೀರ ಯೋಧರು ಇದೀಗ ಭಯೋತ್ಪಾದಕರ ನೆಲೆಗಳ ಮೇಲೆ ವೈಮಾನಿಕ ದಾಳಿ ಆರಂಭಿಸಿದ್ದಾರೆ. ಯಾವುದೇ ಭಯೋತ್ಪಾದಕ ಶಕ್ತಿಯು ಅಮೆರಿಕದ ವಾಣಿಜ್ಯ ಮತ್ತು ನೌಕಾ ಹಡಗುಗಳು ವಿಶ್ವದ ಜಲಮಾರ್ಗಗಳಲ್ಲಿ ಮುಕ್ತವಾಗಿ ಸಂಚರಿಸುವುದನ್ನು ತಡೆಯಲು ಸಾಧ್ಯವಿಲ್ಲ' ಎಂದು ಟ್ರಂಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ಬಂಡುಕೋರರನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ದಾಳಿ ಬಗ್ಗೆ ಪತ್ರಿಕ್ರಿಯಿಸಿರುವ ಹೂತಿ ಮಾಧ್ಯಮ ಕಚೇರಿಯ ಉಪ ಮುಖ್ಯಸ್ಥ ನಸ್ರುದ್ದೀನ್ ಅಮೆರ್, 'ವೈಮಾನಿಕ ದಾಳಿಯಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.