ಅನಂತ್‌ನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಮೂರು ಡಜನ್‌ಗೂ ಅಧಿಕ ಕುಟುಂಬಗಳು ನಿತಾಶ್ರಿತರಾಗಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕಡಿಪುರದ ಗಾಜಿನಾಗ್ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಪಕ್ಕದ ಮನೆಗಳಿಗೂ ಹಬ್ಬಿದೆ ಎಂದು ಅವರು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟಿಸಿ, ಹೆಚ್ಚಿನ ಜನಸಾಂದ್ರತೆ ಇರುವ ಪ್ರದೇಶವಾಗಿದ್ದರಿಂದ ಬೆಂಕಿ ಬೇಗನೆ ಹಬ್ಬಿದೆ.
ಪೊಲೀಸ್ ಹಾಗೂ ಇತರ ಭದ್ರತಾ ಪಡೆಗಳು ಸೇರಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಿಂದ ಹಲವು ಜೀವಗಳನ್ನು ಉಳಿಸಲಾಗಿದೆ. ಹಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕ ಅಧಿಕಾರಿಗಳು ರಾತ್ರಿ ಹಲವು ಗಂಟೆಗಳು ಬೆಂಕಿ ನಂದಿಸುವ ಕಠಿಣ ಪ್ರಯತ್ನ ಮಾಡಿವೆ. ಸದ್ಯ ಬೆಂಕಿಯನ್ನು ಆರಿಸಲಾಗಿದೆ.
ಸುಮಾರು 22 ಮನೆಗಳನ್ನು ಬೆಂಕಿ ಆಹುತಿ ಪಡೆದುಕೊಂಡಿದ್ದು, 37 ಕುಟುಂಬಗಳು ನಿರಾಶ್ರಿತರಾಗಿವೆ ಎಂದು ಅನಂತ್‌ನಾಗ್ ತಹಶೀಲ್ದಾರ್ ಸಜಾದ್ ಅಹ್ಮದ್ ವಾನಿ ತಿಳಿಸಿದ್ದಾರೆ.
ಘಟನೆಯಿಂದ ಸಮಸ್ಯೆಗೊಳಗಾದವರ ನೆರವಿಗೆ ಆಡಳಿತ ಸಜ್ಜಾಗಿದೆ ಎಂದು ವಾನಿ ತಿಳಿಸಿದ್ದಾರೆ.
ಸಂತ್ರಸ್ತರಿಗೆ ಸಹಾಯ ಮಾಡಲು ಪರಿಹಾರ ಮತ್ತು ಪುನರ್ವಸತಿ ಕ್ರಮಗಳು ನಡೆಯುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
'ಅನಂತನಾಗ್‌ನಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿಯು ಅನೇಕ ಮನೆಗಳನ್ನು ಸುಟ್ಟುಹಾಕಿದೆ. ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಕ್ರಮಗಳು ನಡೆಯುತ್ತಿವೆ. ಈ ಕಷ್ಟದ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ' ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.