ಮುಂಬೈ : ಮಹಾರಾಷ್ಟ್ರದಲ್ಲಿ ಈವರೆಗೆ 225 ಗಿಲಾನ್ ಬರೈ ಸಿಂಡ್ರೋಮ್'(ಜಿಬಿಎಸ್) ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 197 ದೃಢಪಟ್ಟಿದ್ದು, 28 ಶಂಕಿತ ಪ್ರಕರಣಗಳಿವೆ.
ರಾಜ್ಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಈ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ.ವರದಿಯಾದ ಪ್ರಕರಣಗಳಲ್ಲಿ, 179 ರೋಗಿಗಳು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.24 ವ್ಯಕ್ತಿಗಳು ತೀವ್ರ ನಿಗಾದಲ್ಲಿದ್ದಾರೆ. 15 ಜನರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.
ಪುಣೆ ಪಾಲಿಕೆ, ಪಾಲಿಕೆಗೆ ಇತ್ತೀಚೆಗೆ ಸೇರಿಸಲಾದ ಹಳ್ಳಿಗಳು, ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್, ಪುಣೆ ಗ್ರಾಮೀಣ ಮತ್ತು ಇತರ ಜಿಲ್ಲೆಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಸೂಚಿಸಿದ್ದಾರೆ.
ಜಿಬಿಎಸ್ ಒಂದು ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ಇದು ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಹೆಚ್ಚಿನ ರೋಗಿಗಳು ಸಕಾಲಿಕ ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೂ, ತೀವ್ರತರವಾದ ಪ್ರಕರಣಗಳಿಗೆ ದೀರ್ಘಕಾಲದ ಆಸ್ಪತ್ರೆಗೆ ದಾಖಲು ಮತ್ತು ವೆಂಟಿಲೇಟರ್ ಬೆಂಬಲ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.