ಮುಂಬೈ: ದೇಶದ ಕಳಪೆ ಜೀವನ ಮಟ್ಟ, ವಿದೇಶದ ಉತ್ತಮ ಜೀವನ ಮಟ್ಟ ಹಾಗೂ ಉದ್ಯಮ ಸ್ನೇಹಿ ವಾತಾವರಣದಿಂದಾಗಿ ಶೇ 22 ರಷ್ಟು ಭಾರತೀಯ ಭಾರೀ ಶ್ರೀಮಂತರು ದೇಶ ತೊರೆಯಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಬುಧವಾರ ಹೇಳಿದೆ.
ಭಾರಿ ನಿವ್ವಳ ಮೌಲ್ಯವಿರುವ (ಯುಎಚ್‌ಎನ್‌ಐ-Ultra High Networth Individuals) 150 ಶ್ರೀಮಂತರ ಸಮೀಕ್ಷೆ ನಡೆಸಲಾಗಿದ್ದು, ಅಮೆರಿಕ, ಯುಕೆ, ಆಸ್ಟ್ರೇಲಿಯಾ, ಕೆನಡಾ ಹಾಗೂ ಯುಎಇಯಲ್ಲಿ ನೆಲೆಸಲು ಇಷ್ಟಪಡುವುದಾಗಿ ಹೇಳಿದ್ದಾರೆ.
ಇ.ವೈ ಸಹಯೋಗದೊಂದಿಗೆ 'ಕೋಟಕ್ ಪ್ರೈವೇಟ್' ಈ ಸಮೀಕ್ಷೆ ನಡೆಸಿದ್ದು, 'ಪ್ರತಿ ವರ್ಷ 25 ಲಕ್ಷ ಭಾರತೀಯರು ಇತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ' ಎಂದು ವಿದೇಶಾಂಗ ಇಲಾಖೆಯ ದಾಖಲೆಯನ್ನು ಉಲ್ಲೇಖಿಸಿ ಹೇಳಿದೆ.
ಸಮೀಕ್ಷೆ ಮಾಡಲಾದ ಪ್ರತೀ ಐದರಲ್ಲಿ ಓರ್ವ ಯುಎಚ್‌ಎನ್‌ಐಗಳು ವಿದೇಶಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ ಅಥವಾ ಅದರ ತಯಾರಿಯಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತೀಯ ಪೌರತ್ವವನ್ನು ಉಳಿಸಿಕೊಂಡು ತಮ್ಮ ಆಯ್ಕೆಯ ದೇಶದಲ್ಲಿ ಶಾಶ್ವತವಾಗಿ ವಾಸಿಸಲು ಉದ್ದೇಶಿಸಿದ್ದಾರೆ.
ಇವರೆಲ್ಲರೂ ಸುಧಾರಿತ ಜೀವನಮಟ್ಟ, ಆರೋಗ್ಯ ಹಾಗೂ ಗುಣಮಟ್ಟದ ಶಿಕ್ಷಣವನ್ನು ಬಯಸುತ್ತಿದ್ದಾರೆ. ಈ ಪೈಕಿ ಮೂರನೇ ಒಂದರಷ್ಟು ಮಂದಿ ಉದ್ಯಮ ಸ್ನೇಹಿ ವಾತಾವರಣಕ್ಕಾಗಿ ದೇಶ ತೊರೆಯಲು ಮುಂದಾಗಿದ್ದಾರೆ.
ವಲಸೆಯ ನಿರ್ಧಾರವನ್ನು 'ಭವಿಷ್ಯದ ಬಂಡವಾಳ' ಎಂದು ಕರೆದಿರುವ ಅವರು, ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕಾಗಿ ಈ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಉದ್ಯಮಿಗಳು ಹಾಗೂ ಅವರ ಉತ್ತರಾಧಿಕಾರಿಗಳಿಗಿಂತ ವೃತ್ತಿಪರರು ವಲಸೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. 36-40 ಹಾಗೂ 61 ವರ್ಷಕ್ಕಿಂತ ಮೇಲ್ಪಟ್ಟವರು ವಲಸೆಗೆ ಉತ್ಸುಕರಾಗಿದ್ದಾರೆ.
₹ 25 ಕೋಟಿಗಿಂತ ಅಧಿಕ ಆಸ್ತಿ ಇರುವವರನ್ನು ಯುಎಚ್‌ಎನ್‌ಐಗಳಂದು ಪರಿಗಣಿಸಲಾಗಿದ್ದು, 2023ರಲ್ಲಿ ದೇಶದಲ್ಲಿ 2.83 ಲಕ್ಷ ಮಂದಿ ಇದ್ದರು.