ದೀರ್ ಅಲ್-ಬಲಾಹ್ (ಎಪಿ): ಗಾಜಾಪಟ್ಟಿಯ ಮೇಲೆ ಮಂಗಳವಾರ ರಾತ್ರಿಯಿಡಿ ಇಸ್ರೇಲ್ ನಡೆಸಿದ ದಾಳಿಯಿಂದಾಗಿ 23 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ನಗರವಾದ ಖಾನ್ ಯೂನಿಸ್‌ನಲ್ಲಿ ಟೆಂಟ್‌ವೊಂದರಲ್ಲಿದ್ದ ಮೂರು ಮಕ್ಕಳು, ಅವರ ಪೋಷಕರು ಸೇರಿದಂತೆ ಹಲವರು ಮೃತಪಪಟ್ಟಿದ್ದಾರೆ ಎಂದು ನಸೇರ್ ಆಸ್ಪತ್ರೆ ಹೇಳಿದೆ.
ಮೂರು ಪ್ರತ್ಯೇಕ ದಾಳಿಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ ಅಕ್ಸಾ ಆಸ್ಪತ್ರೆ ತಿಳಿಸಿದೆ. ಮತ್ತೊಂದು ದಾಳಿಯಲ್ಲಿ ನುಸೈರತ್ ನಿರಾಶ್ರಿತರ ಶಿಬಿರದಲ್ಲಿದ್ದ ಮೂವರು ಹತ್ಯೆಯಾಗಿದ್ದಾರೆ ಎಂದು ಆವ್ಡಾ ಆಸ್ಪತ್ರೆ ಹೇಳಿದೆ.
ವಸತಿ ಕಟ್ಟಡವೊಂದರ ಮೇಲೆ ನಡೆದ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ತುರ್ತು ಸೇವೆ ವಿಭಾಗ ತಿಳಿಸಿದೆ.
ಹೂಥಿ ಬಂಡುಕೋರರ ಮೇಲೆ ಅಮೆರಿಕ ದಾಳಿ
ದುಬೈ: ಹೂಥಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಅಮೆರಿಕವು ಯೆಮೆನ್‌ನಾದ್ಯಂತ ಮಂಗಳವಾರ ಮುಂಜಾನೆ ತೀವ್ರ ದಾಳಿ ನಡೆಸಿದೆ. ರಾಜಧಾನಿಯಲ್ಲಿ ನಡೆದ ದಾಳಿಯೊಂದರಲ್ಲಿ ಇಬ್ಬರು ಹತರಾಗಿದ್ದು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಬಂಡುಕೋರರ ಸಂಘಟನೆ ಹೇಳಿದೆ. ಸಾಗರ ಮೂಲಕ ವ್ಯಾಪಾರ ಮತ್ತು ಇಸ್ರೇಲ್ ಬೆದರಿಕೆ ಒಡ್ಡುವ ಬಂಡುಕೋರರ ವಿರುದ್ಧದ ಅಮೆರಿಕದ ಕಾರ್ಯಾಚರಣೆಯು ಹತ್ತನೇ ದಿನವೂ ಮುಂದುವರಿದಿದೆ. ದಾಳಿಯ ಬಗ್ಗೆ ಅಮೆರಿಕ ಯಾವುದೇ ನಿಖರ ಮಾಹಿತಿಯನ್ನು ನೀಡಿಲ್ಲ ಆದರೆ ಹೂಥಿ ಬಂಡುಕೋರರ ನಾಯಕ ಮಿಸ್ಲಿಯರ್‌ನನ್ನು ಹೊಡೆಸುರುಳಿಸಲಾಗಿದೆ' ಎಂದು ಅಮೆರಿಕದ ರಕ್ಷಣಾ ಸಲಹೆಗಾರ ಮೈಕ್ ವಾಲ್ಟ್‌ಜ್ ಹೇಳಿದ್ದಾರೆ.