ನವದೆಹಲಿ: 'ದೇಶದಾದ್ಯಂತ 25 ಸಾವಿರ ಕಿಲೋಮೀಟರ್‌ನಷ್ಟು ಎರಡು ಪಥಗಳ ಹೆದ್ದಾರಿಯನ್ನು ₹10 ಲಕ್ಷ ಕೋಟಿ ವೆಚ್ಚದಲ್ಲಿ ನಾಲ್ಕು ಪಥಗಳ ರಸ್ತೆಯನ್ನಾಗಿ ಬದಲಾಯಿಸಲಾಗುವುದು. ಇದರಿಂದ, ರಸ್ತೆ ಅಪಘಾತಗಳಲ್ಲಿ ತೀವ್ರ ಇಳಿಮುಖವಾಗಲಿದೆ' ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ತಿಳಿಸಿದರು.
ಅದೇ ರೀತಿ, '₹6 ಲಕ್ಷ ಕೋಟಿ ವೆಚ್ಚದಲ್ಲಿ 16 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಆರು ಪಥಗಳ ರಸ್ತೆಯನ್ನಾಗಿ ವಿಸ್ತರಿಸಲಾಗುವುದು' ಎಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು, 'ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ಎರಡು ವರ್ಷದ ಒಳಗಾಗಿ ರಸ್ತೆ ನಿರ್ಮಾಣ ಪೂರ್ಣಗೊಳ್ಳಲಿದೆ' ಎಂದು ತಿಳಿಸಿದರು.
'ಭಾರತದಲ್ಲಿ ಪ್ರತಿ ವರ್ಷವೂ ರಸ್ತೆ ಅಪಘಾತಗಳಿಂದ 4.80 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಇದರಲ್ಲಿ 1.88 ಲಕ್ಷ ಮಂದಿ 18ರಿಂದ 45 ವರ್ಷದ ಒಳಗಿನವರಾಗಿದ್ದಾರೆ. ರಸ್ತೆ ಅಪಘಾತಗಳಿಂದ ದೇಶದ ಜಿಡಿಪಿಗೆ ಶೇ 3ರಷ್ಟು ನಷ್ಟ ಉಂಟಾಗುತ್ತಿದ್ದು, 2030ರ ವೇಳೆಗೆ ಅಪಘಾತಗಳ ಪ್ರಮಾಣವನ್ನು ಶೇಕಡಾ 50ರಷ್ಟು ಇಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಇತ್ತೀಚಿಗೆ ನಿತಿನ್ ಗಡ್ಕರಿ ತಿಳಿಸಿದ್ದರು.