HEALTH TIPS

ಕ್ಷೇತ್ರ ಮರುವಿಂಗಡಣೆ 25 ವರ್ಷ ಬೇಡ: ಜಂಟಿ ಕ್ರಿಯಾ ಸಮಿತಿಯ ಸಭೆ ನಿರ್ಣಯ

Top Post Ad

Click to join Samarasasudhi Official Whatsapp Group

Qries

ಚೆನ್ನೈ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ತಡೆಹಿಡಿದಿರುವುದನ್ನು 2026ರ ನಂತರ 25 ವರ್ಷಗಳವರೆಗೆ ಮುಂದುವರಿಸಬೇಕು ಎಂದು ಡಿಎಂಕೆ ನೇತೃತ್ವದ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಆಗ್ರಹ ಇರುವ ಮನವಿಯನ್ನು ಸಂಸದರು ಒಟ್ಟಾಗಿ, ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿಯಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಬೇಕು ಎಂದು 14 ಪಕ್ಷಗಳ ಪ್ರತಿನಿಧಿಗಳು ಭಾಗಿಯಾಗಿದ್ದ ಸಭೆಯು ಶನಿವಾರ ತೀರ್ಮಾನಿಸಿದೆ.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಚೆನ್ನೈನಲ್ಲಿ ಆಯೋಜಿಸಿದ್ದ ಸಭೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಂದಿದ್ದರು.

ಜನಸಂಖ್ಯೆಯ ಏರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದ ರಾಜ್ಯಗಳಿಗೆ ದಂಡ ವಿಧಿಸುವ ಕೆಲಸವನ್ನು ಮರುವಿಂಗಡಣೆ ಪ್ರಕ್ರಿಯೆಯು ಮಾಡಬಾರದು ಎಂದು ಸಭೆಯು ಒತ್ತಿಹೇಳಿತು.

ಸಭೆಗೆ ಬರುವುದಾಗಿ ಹೇಳಿದ್ದ ಟಿಎಂಸಿ ಮತ್ತು ವೈಎಸ್‌ಆರ್‌ಸಿಪಿ ದೂರ ಉಳಿದವು. ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾತಂತ್ರ ವ್ಯವಸ್ಥೆಯ ಸ್ವರೂಪವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಡೆಸುವ ಮರುವಿಂಗಡಣೆ ಪ್ರಕ್ರಿಯೆಯು ಪಾರದರ್ಶಕವಾಗಿ ಇರಬೇಕು; ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳಿಗೆ, ರಾಜ್ಯ ಸರ್ಕಾರಗಳಿಗೆ ಹಾಗೂ ಸಂಬಂಧಪಟ್ಟ ಎಲ್ಲ ಭಾಗೀದಾರರಿಗೆ ಚರ್ಚಿಸಲು, ಮರುವಿಂಗಡಣೆ ಪ್ರಕ್ರಿಯೆಗೆ ತಮ್ಮದೇ ಆದ ಕೊಡುಗೆ ನೀಡಲು ಅವಕಾಶ ಇರಬೇಕು ಎಂದು ಜೆಎಸಿ ಸಭೆಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಲಾಗಿದೆ.

'ಸಂವಿಧಾನಕ್ಕೆ ತಂದ 42ನೇ, 84ನೇ ಹಾಗೂ 87ನೇ ತಿದ್ದುಪಡಿಯ ಉದ್ದೇಶವು ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳನ್ನು ರಕ್ಷಿಸುವುದಾಗಿತ್ತು, ಅವುಗಳಿಗೆ ಉತ್ತೇಜನ ನೀಡುವುದಾಗಿತ್ತು. ದೇಶದ ಜನಸಂಖ್ಯೆಯ ಬೆಳವಣಿಗೆಯನ್ನು ಸ್ಥಿರಗೊಳಿಸುವ ಗುರಿಯನ್ನು ಇನ್ನೂ ತಲುಪಿ ಆಗಿಲ್ಲದಿರುವಾಗ, 1971ರ ಜನಗಣತಿಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಸ್ಥಿರಗೊಳಿಸಿರುವ ಕ್ರಮವನ್ನು ಇನ್ನೂ 25 ವರ್ಷಗಳಿಗೆ ವಿಸ್ತರಿಸಬೇಕು' ಎಂದು ನಿರ್ಣಯದಲ್ಲಿ ಹೇಳಲಾಗಿದೆ.

'ಇಲ್ಲಿ ವಿವರಿಸಿರುವ ತತ್ವಗಳಿಗೆ ವಿರುದ್ಧವಾದ ಬಗೆಯಲ್ಲಿ ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಗೆ ಯತ್ನಿಸಿದರೆ ಅದನ್ನು ವಿರೋಧಿಸಲು ಸಂಸದೀಯ ಕಾರ್ಯತಂತ್ರ ಏನಿರಬೇಕು ಎಂಬುದನ್ನು ಪ್ರಮುಖ ಸಂಸದರ ಸಮಿತಿಯು ಸಮನ್ವಯದಿಂದ ತೀರ್ಮಾನಿಸಲಿದೆ' ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.

ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ರಾಜಕೀಯ ಪಕ್ಷಗಳು, ತಮ್ಮ ರಾಜ್ಯಗಳ ವಿಧಾನಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಸೂಕ್ತವಾದ ನಿರ್ಣಯ ಅಂಗೀಕರಿಸಲು, ಅದನ್ನು ಕೇಂದ್ರಕ್ಕೆ ಕಳುಹಿಸಲು ಯತ್ನಿಸಲಿವೆ.

ಹಿಂದೆ ಕ್ಷೇತ್ರ ಮರುವಿಂಗಡಣೆ ಯಾವಾಗ, ಎಂತಹ ಸಂದರ್ಭಗಳಲ್ಲಿ ನಡೆದಿತ್ತು ಎಂಬುದರ ಮಾಹಿತಿಯನ್ನು, ಪ್ರಸ್ತಾವಿತ ಮರುವಿಂಗಡಣೆಯ ಪರಿಣಾಮಗಳನ್ನು ಜನರಿಗೆ ತಿಳಿಸಲು ಜೆಎಸಿಯು ಅಗತ್ಯ ಪ್ರಯತ್ನ ನಡೆಸಲಿದೆ ಎಂಬುದು ಕೂಡ ನಿರ್ಣಯದ ಭಾಗವಾಗಿದೆ.

ಕ್ಷೇತ್ರ ಮರುವಿಂಗಡಣೆ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಡಿಎಂಕೆ ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಆರಂಭಿಸಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries