ಕಾಸರಗೋಡು: ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಸಜ್ಜುಗೊಂಡಿರುವ ಕಾಸರಗೋಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಮಧೂರು ಶ್ರೀ ಮದನಂತೆಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಕಳಶಪ್ರಾಯವಾಗಿರುವ ಶಿಲಾಮಯ ಮಹಾ ದ್ವಾರ ಮತ್ತು ರಾಜಾಂಗಣದ ಉದ್ಘಾಟನೆ ಮಾ.26 ರಂದು ಬೆಳಗ್ಗೆ 10ಕ್ಕೆ ಜರುಗಲಿದೆ. ಸುಮಾರು ಒಂದೂವರೆ ಕೋಟಿ ಗೂ ಹೆಚ್ಚಿನ ವೆಚ್ಚದಲ್ಲಿ ದ್ರಾವಿಡ ಶೈಲಿಯ ಮಹಾದ್ವಾರ ನಿರ್ಮಿಸಲಾಗಿದೆ.
ಕೇಂದ್ರಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್‍ಗೋಪಿ ಮಹಾದ್ವಾರ ಲೋಕಾರ್ಪಣೆಗೊಳಿಸುವರು. ಜಗದ್ಗುರು ಶ್ರೀ ಶಂಕರಾಚಾರ್ಯ ಪರಂಪರೆಯ ಶ್ರೀಮದ್ ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದoಗಳವರು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಕೊಡುಗೈ ದಾನಿಗಳಾದ ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಕೊಡುಗೆಯಗಿ ಮಹಾದ್ವಾರ ನಿರ್ಮಿಸಲಾಗಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನಾಡೋಜ ಜಿ ಶಂಕರ್ ಉಡುಪಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಕೆ ಕೆ ಶೆಟ್ಟಿ ಕುತ್ತಿಕ್ಕಾರ್ ಅಹಮದ್‍ನಗರ, ಕನ್ಯಾನ ರಘುರಾಮ ಶೆಟ್ಟಿ, ಬಿ. ಕೆ. ಮಧೂರು ಮುಂಬೈ, ಯಕ್ಷ ದ್ರುವ ಪಟ್ಲ ಫೌಂಡೇಶನ್ ನಿರ್ದೇಶಕ ಸತೀಶ್ ಶೆಟ್ಟಿ ಪಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬ್ರಹ್ಮ ಕಲಶೋತ್ಸವ, ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ. ಬಿ. ಎಸ್. ರಾವ್ ಅಧ್ಯಕ್ಷ ತೆ ವಹಿಸುವರು.