ಮಧೂರು : ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಮಾ 27ರಿಂದ ಏ. 7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿರುವುದು.
ದೇವಾಲಯದ ಎದುರು ನಿರ್ಮಾಣಗೊಳ್ಳುತ್ತಿರುವ ಸಂಪೂರ್ಣ ಶಿಲಾಮಯ ರಾಜಗೋಪುರ ಹಾಗೂ ರಾಜಾಂಗಣದ ಉದ್ಘಾಟನೆ ಮಾ 26ರಂದು ನಡೆಯಲಿರುವುದು. ಕೊಡುಗೈ ದಾನಿ, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಸಂಪೂರ್ಣ ವೆಚ್ಚ ಭರಿಸಿ ಈ ಮಹಾದ್ವಾರ ಒಳಗೊಂಡ ರಾಜಗೋಪುರ ಹಾಗೂ ರಾಜಾಂಗಣ ನಿರ್ಮಿಸಿಕೊಟ್ಟಿದ್ದಾರೆ. 26ರಂದು ಬೆಳಗ್ಗೆ 10ಕ್ಕೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯಸಚಿವ ಸುರೇಶ್ ಗೋಪಿ ರಾಜಗೋಪುರ ಮತ್ತು ರಾಜಾಂಗಣ ಲೋಕಾರ್ಪಣೆಗೈಯುವರು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್ ರಾವ್ ಅಧ್ಯಕ್ಷತೆ ವಹಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯೊಂದಿಗೆ ಆಶೀರ್ವಚನ ನೀಡುವರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7ಕ್ಕೆ 'ಜೋಡು ದೀಟಿಗೆ'ತುಳು ನಾಟಕ ಪ್ರದರ್ಶನಗೊಳ್ಳುವುದು.
27ರಂದು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಚಲನೆ ನೀಡಲಾಗುವುದು. ಅಂದು ಬೆಳಗ್ಗೆ 8ಕ್ಕೆ ತಂತ್ರಿವರ್ಯರಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, 9.30ಕ್ಕೆ ಪ್ರಧಾನ ವೇದಿಕೆಯಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಡುಪಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡುವರು.
30ರಂದು ಬೆಳಗ್ಗೆ 9ಕ್ಕೆ ಶ್ರೀ ಮದನಂತೇಶ್ವರ ದೇವರ ಪ್ರಾಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ ನಡೆಯುವುದು. ಏ. 2ರಂದು ಬೆಳಗ್ಗೆ 7ಕ್ಕೆ ಬ್ರಹ್ಮಕಲಶಾಭಿಷೇಕ ಆರಂಭಗೊಳ್ಳುವುದು. ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯುವುದು. ಏ. 5ರಂದು 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ, ಮಧ್ಯಾಹ್ನ ಅಪ್ಪ ತಯಾರಿ ಆರಂಭ, ರಾತ್ರಿ 10ಕ್ಕೆ ಮಹಾಮೂಡಪ್ಪಾಧಿವಾಸ ಹೋಮ, 11ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, 6ರಂದು ಬೆಳಗ್ಗೆ 6.20ಕ್ಕೆ ಕವಾಟೊದ್ಘಾಟನೆ, ಬೊಡ್ಡಜ್ಜ ಮಧೂರು ಶ್ರೀ ಸಿದ್ಧಿವಿನಾಯಕ ದೇವರ ದಿವ್ಯ ದರ್ಶನ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯುವುದು. 7ರಂದು ಸಮಾರೋಪ ಸಮಾರಂಭ ನಡೆಯುವುದು.