ಪೆರ್ಲ: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಎಣ್ಮಕಜೆ ಗ್ರಾಮ ಪಂಚಾಯಿತಿ ಮತ್ತು ಅಕ್ಷಯ ಜಿಲ್ಲಾ ಯೋಜನಾ ಕಚೇರಿಯ ನೇತೃತ್ವದಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿಯ ಬಜಕೂಡ್ಲು ಕಾನದ ಎಂ. ಬಡ್ಸ್ ಶಾಲೆಯಲ್ಲಿ ಎಬಿಸಿಡಿ ಮೆಗಾ ಶಿಬಿರವನ್ನು ನಿನ್ನೆ ಆಯೋಜಿಸಲಾಗಿತ್ತು. ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಯೋಜನಾ ವ್ಯವಸ್ಥಾಪಕ ಕಪಿಲ್ ದೇವ್ ಯೋಜನೆಯನ್ನು ವಿವರಿಸಿದರು. ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಮತ್ತು ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಮಾತನಾಡಿದರು. ಕಾಸರಗೋಡು ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಮೋಹನ್ ದಾಸ್ ಸ್ವಾಗತಿಸಿ, ಬುಡಕಟ್ಟು ವಿಸ್ತರಣಾಧಿಕಾರಿ ವೀಣಾ ನಾರಾಯಣನ್ ವಂದಿಸಿದರು.
ಎಣ್ಮಕಜೆ ಗ್ರಾಮ ಪಂಚಾಯಿತಿಯ ಎಲ್ಲಾ ಪರಿಶಿಷ್ಟ ಪಂಗಡದ ಸದಸ್ಯರಿಗೆ ಆರು ಮೂಲ ದಾಖಲೆಗಳನ್ನು ಸಿದ್ಧಪಡಿಸಲು ಈ ಶಿಬಿರವನ್ನು ನಡೆಸಲಾಯಿತು. 287 ಮಂದಿ ಜನರಿಗೆ 421 ಸೇವೆಗಳನ್ನು ಒದಗಿಸಲಾಗಿದೆ. ಆಧಾರ್ 72, ಪಡಿತರ ಚೀಟಿ 94, ಚುನಾವಣಾ ಐಡಿ 89, ಆರೋಗ್ಯ ವಿಮೆ 11, ಬ್ಯಾಂಕ್ ಖಾತೆ 12, ಡಿಜಿ ಲಾಕರ್ 103, ವಸತಿ ಪ್ರಮಾಣಪತ್ರ 30, ಮತ್ತು ಇ-ಜಿಲ್ಲಾ ಸೇವೆಗಳು 10 ಮಂದಿಗೆ ಒದಗಿಸಲ್ಪಟ್ಟವು.
ಎಣ್ಮಕಜೆ ಕಾಸರಗೋಡು ಜಿಲ್ಲೆಯಲ್ಲಿ ಎಬಿಸಿಡಿ ಯೋಜನೆಯನ್ನು ಜಾರಿಗೆ ತಂದ ಒಂಬತ್ತನೇ ಪಂಚಾಯತಿಯಾಗಿದೆ. ಎಣ್ಮಕಜೆ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ ವ್ಯಕ್ತಿಗಳು ಶಿಬಿರಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಅವರು ಅಕ್ಷಯ ಕೇಂದ್ರಗಳಲ್ಲಿ ಒಂದು ತಿಂಗಳ ಅವಧಿಗೆ ಬುಡಕಟ್ಟು ಸ್ನೇಹಿ ಕೌಂಟರ್‍ಗಳನ್ನು ಸ್ಥಾಪಿಸುವ ಮೂಲಕ ದಾಖಲೆಗಳನ್ನು ಉಚಿತವಾಗಿ ಪಡೆಯುವ ಸೌಲಭ್ಯವನ್ನು ವ್ಯªಸ್ಥೆಗೊಳಿಸಲಾಗಿದೆ. ನಾಗರಿಕ ಸರಬರಾಜು ಇಲಾಖೆ, ಕಂದಾಯ ಇಲಾಖೆ, ರಾಜ್ಯ ಆರೋಗ್ಯ ಸಂಸ್ಥೆ, ಆರೋಗ್ಯ ಇಲಾಖೆ, ಲೀಡ್ ಬ್ಯಾಂಕ್, ಸ್ಥಳೀಯಾಡಳಿತ ಇಲಾಖೆ, ನಾಲಂದ ಕಾಲೇಜು ಪೆರ್ಲದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಹಸಿರು ಕ್ರಿಯಾಸೇನೆ ಸದಸ್ಯರು, ಅಕ್ಷಯ ಪೋಷಕರು, ಚುನಾವಣಾ ಐಡಿ ಇಲಾಖೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಪ್ರವರ್ತಕರು ಮತ್ತು ಇತರ ಅಧಿಕಾರಿಗಳು ಯೋಜನೆಯನ್ನು ಕಾರ್ಯಗತಗೊಳಿಸಲು ಸಹಕರಿಸಿದರು.