ತಿರುವನಂತಪುರ: ಯುಎಇಯಲ್ಲಿ ಬೆನ್ನು ಬೆನ್ನಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗುತ್ತಿದೆ ಎಂಬ ವರದಿಯು, ಭಾರತದ ಅನೇಕ ಕುಟುಂಬಗಳಿಗೆ ಕಳವಳ ಉಂಟುಮಾಡಿದೆ. 2025ರ ಫೆಬ್ರುವರಿ ಅಂತ್ಯದವರೆಗಿನ ಅಂಕಿ ಸಂಖ್ಯೆಯ ಪ್ರಕಾರ ಯುಎಇಯಲ್ಲಿ ಭಾರತದ 29 ಮಂದಿ ಮರಣದಂಡನೆಗೆ ಗುರಿಯಾಗಿದ್ದಾರೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಫೆಬ್ರವರಿ 13ರಂದು ರಾಜ್ಯಸಭೆಗೆ ನೀಡಿದ ಮಾಹಿತಿಯಂತೆ, ಭಾರತದ ಒಟ್ಟು 54 ಮಂದಿ ವಿದೇಶಗಳಲ್ಲಿ ಮರಣದಂಡನೆ ಎದುರಿಸುತ್ತಿದ್ದಾರೆ. ಅವುಗಳಲ್ಲಿ ಅತಿ ಹೆಚ್ಚು ಯುಎಇಯಲ್ಲಿ ಆಗಿದ್ದು (29), ಸೌದಿ ಅರೇಬಿಯಾದಲ್ಲಿ 12 ಭಾರತೀಯರು ಗಲ್ಲು ಎದುರಿಸುತ್ತಿದ್ದಾರೆ.
ಯುಎಇಯಲ್ಲಿ ಈಚೆಗೆ ಮರಣದಂಡನೆಗೆ ಗುರಿಯಾದ ಉತ್ತರ ಪ್ರದೇಶದ ಒಬ್ಬ ಮಹಿಳೆ ಮತ್ತು ಕೇರಳದ ಇಬ್ಬರು ಪುರುಷರು ಈ 29 ಮಂದಿಯಲ್ಲಿ ಸೇರಿದ್ದಾರೆ. ಗಲ್ಫ್ ದೇಶಗಳಲ್ಲಿ ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮರಣದಂಡನೆ ಎದುರಿಸುತ್ತಿರುವವರಲ್ಲಿ ಕೇರಳಿಯರು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆಗಳಿವೆ.
'ವಿದೇಶಿ ಪ್ರಜೆಯ ಮರಣದಂಡನೆಯನ್ನು ಜಾರಿಗೊಳಿಸುವ ಮುನ್ನ ಆಯಾ ದೇಶದವರು ಅವರ ಕುಟುಂಬದವರಿಗೆ ಮಾಹಿತಿ ನೀಡಬೇಕು' ಎಂದು ಈ ಪ್ರಶ್ನೆಯನ್ನು ರಾಜ್ಯಸಭೆಯಲ್ಲಿ ಎತ್ತಿದ ರಾಜ್ಯಸಭಾ ಸದಸ್ಯ ಹ್ಯಾರಿಸ್ ಬೀರಾನ್ 'ಪ್ರಜಾವಾಣಿ'ಗೆ ತಿಳಿಸಿದರು.
'ಆದರೆ ಯುಎಇಯಲ್ಲಿ ಮೂವರು ಭಾರತೀಯರ ಗಲ್ಲು ಶಿಕ್ಷೆ ಜಾರಿಗೊಳಿಸುವಾಗ ಈ ನಿಯಮವನ್ನು ಪಾಲಿಸಲಾಗಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಅನ್ನು ಪ್ರತಿನಿಧಿಸುವ ಬೀರಾನ್ ಹೇಳಿದರು.
ಅರಬ್ ದೇಶಗಳಲ್ಲಿ ಮರಣದಂಡನೆ ಎದುರಿಸುತ್ತಿರುವ ಮಹಿಳೆ ಸೇರಿದಂತೆ ಕೇರಳದ ಇಬ್ಬರ ಬಿಡುಗಡೆಗಾಗಿ ನಡೆದಿರುವ ಪ್ರಯತ್ನಗಳು ಈಗಾಗಲೇ ಸಾಕಷ್ಟು ಸುದ್ದಿಯಾಗಿವೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಹಣ (ಬ್ಲಡ್ ಮನಿ) ಪಾವತಿಸುವ ಮೂಲಕ ಅವರ ಬಿಡುಗಡೆಗೆ ಪ್ರಯತ್ನ ಮುಂದುವರಿದಿದೆ.
ಯೆಮನ್‌ನಲ್ಲಿ ತನ್ನ ವ್ಯವಹಾರ ಪಾಲುದಾರ ತಲಾಲ್ ಅಬ್ದು ಮಹ್ದಿ ಅವರನ್ನು ಕೊಲೆ ಮಾಡಿದ್ದಕ್ಕಾಗಿ ಕೇರಳದ 36 ವರ್ಷದ ನರ್ಸ್ ನಿಮಿಷ ಪ್ರಿಯಾ ಅವರು ಮರಣದಂಡನೆ ಎದುರಿಸುತ್ತಿದ್ದಾರೆ. ಮಹ್ದಿ ಕುಟುಂಬಕ್ಕೆ ಪರಿಹಾರವಾಗಿ 40 ಸಾವಿರ ಡಾಲರ್ (ಸುಮಾರು ₹34 ಲಕ್ಷ) ಈಗಾಗಲೇ ನೀಡಲಾಗಿದ್ದು, ನಿಮಿಷ ಅವರನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುವ ಪ್ರಯತ್ನ ಪ್ರಗತಿಯಲ್ಲಿದೆ.
₹ 34 ಕೋಟಿ ಸಂಗ್ರಹ
ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ಚಾಲಕ ಅಬ್ದುಲ್ ರಹೀಂ ಅವರ ಬಿಡುಗಡೆ ಕೂಡಾ ತಡವಾಗಿದೆ. 15 ವರ್ಷದ ಬಾಲಕನನ್ನು ಕೊಂದ ಪ್ರಕರಣದಲ್ಲಿ ಅವರಿಗೆ ರಿಯಾದ್‌ನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಬಾಲಕನ ಕುಟುಂಬವು ಪರಿಹಾರವಾಗಿ ₹ 34 ಕೋಟಿ ಮೊತ್ತವನ್ನು ಪಡೆದು ರಹೀಂಗೆ ಕ್ಷಮಾದಾನ ನೀಡಿದೆ. ಕೇರಳದಲ್ಲಿ ಕ್ರೌಡ್‌ಫಂಡಿಂಗ್ ಮೂಲಕ ಈ ಮೊತ್ತ ಸಂಗ್ರಹಿಸಲಾಗಿದೆ.