ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಆಡಿರುವ ಕೆಲವು ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ವಿಮಾನದ ಪೈಲಟ್ ಆಗಿದ್ದ ರಾಜೀವ್ ಅವರು ಪ್ರಧಾನಿ ಹೇಗಾದರು ಎಂದು ಹಲವರು ಅಂದುಕೊಂಡಿದ್ದರು ಎಂಬ ಧಾಟಿಯಲ್ಲಿ ಅಯ್ಯರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು.
'ರಾಜೀವ್ ಅವರು ಪೈಲಟ್ ಆಗಿದ್ದವರು. ಕೇಂಬ್ರಿಜ್‌ನಲ್ಲಿ ಎರಡು ಬಾರಿ ಅನುತ್ತೀರ್ಣರಾಗಿದ್ದರು. ನಾನು ಅವರ ಜೊತೆ ಕೇಂಬ್ರಿಜ್‌ನಲ್ಲಿ ಓದಿದ್ದೆ. ಕೇಂಬ್ರಿಜ್‌ನಲ್ಲಿ ಅನುತ್ತೀರ್ಣ ಆಗುವುದು ಬಹಳ ಕಷ್ಟ. ಅಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆಗುವುದು ಸುಲಭ. ಏಕೆಂದರೆ ವಿಶ್ವವಿದ್ಯಾಲಯವು ಎಲ್ಲರೂ ಪಾಸಾಗಲಿ ಎಂದು ಯತ್ನಿಸುತ್ತದೆ. ಆದರೂ ರಾಜೀವ್ ಅನುತ್ತೀರ್ಣರಾದರು. ನಂತರ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿಯೂ ಅನುತ್ತೀರ್ಣರಾದರು. ಇಂತಹ ವ್ಯಕ್ತಿ ಪ್ರಧಾನಿ ಏಕಾಗಬೇಕು ಎಂದು ನಾನೂ ಯೋಚಿಸಿದ್ದೆ' ಎಂದು ಅಯ್ಯರ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಸಂದರ್ಶನದ ತುಣುಕನ್ನು ಎಕ್ಸ್ ಖಾತೆಯ ಮೂಲಕ ಹಂಚಿಕೊಂಡಿರುವ ಬಿಜೆಪಿ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು, 'ಪರದೆ ಸರಿಯಲಿ' ಎಂದು ಹೇಳಿದ್ದಾರೆ.
ಆದರೆ, ಮಾಳವೀಯ ಅವರು ಹಂಚಿಕೊಂಡಿರುವ ವಿಡಿಯೊ ತುಣುಕು ಸಂದರ್ಶನದಲ್ಲಿ ಅಯ್ಯರ್ ಅವರು ಆಡಿರುವ ಮಾತುಗಳನ್ನು ಪೂರ್ತಿಯಾಗಿ ತೋರಿಸುವುದಿಲ್ಲ. ಆ ಸಂದರ್ಶನದಲ್ಲಿ ಅಯ್ಯರ್ ಅವರು, 'ರಾಜೀವ್ ಅವರು ಅತ್ಯಂತ ಶ್ರೇಷ್ಠ ಪ್ರಧಾನಿಯಾಗಿದ್ದರು' ಎಂದು ಕೂಡ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.
ಇಂದಿರಾ ಗಾಂಧಿ ಅವರನ್ನು ಆರಂಭದಲ್ಲಿ 'ಮೂಕ ಗೊಂಬೆ' ಎಂದು ಕೆಲವರು ಕರೆದಿದ್ದರು. ಆದರೆ ನಂತರದಲ್ಲಿ ಅವರು ರಾಜಕೀಯ ಶಕ್ತಿಯಾಗಿ ಬೆಳೆದರು. ರಾಜೀವ್ ಅವರ ಬಗ್ಗೆ ಆರಂಭದಲ್ಲಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೂ ನಂತರ 'ಅವರು ಅತ್ಯಂತ ಶ್ರೇಷ್ಠ ಪ್ರಧಾನಿಯಾಗಿದ್ದರು ಎಂದು ನಾನು ಈಗ ಹೇಳುತ್ತೇನೆ' ಎಂದೂ ಅಯ್ಯರ್ ಅವರು ಹೇಳಿರುವುದಾಗಿ ಎನ್‌ಡಿಟಿವಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.