ನವದೆಹಲಿ: ಯುಗಾದಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ. 2 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿ ತುಟ್ಟಿ ಭತ್ಯೆ ಶೇ. 53 ಇದ್ದದ್ದು ಶೇ. 55ಕ್ಕೆ ಏರಿಕೆಯಾಗಲಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಕೇಂದ್ರ ಸರ್ಕಾರಿ ನೌಕರರ ಡಿಎ ಏರಿಕೆ ಹಾಗೂ ಪಿಂಚಣಿದಾರರ ಡಿಆರ್ ಹೆಚ್ಚಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಏರಿಕೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರಿಂದ 1.15 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಈ ಹೊಸ ಡಿಎ ಮತ್ತು ಡಿಆರ್ ಹೆಚ್ಚಳ ಜನವರಿ ತಿಂಗಳಿಂದ ಅನ್ವಯ ಆಗುತ್ತದೆ. ಏಪ್ರಿಲ್ನಲ್ಲಿ ಸಿಗಲಿರುವ ಮಾರ್ಚ್ ತಿಂಗಳ ಸಂಬಳದಲ್ಲಿ ಈ ಏರಿಕೆ ಕಾಣಬಹುದು. ಜನವರಿಯನ್ನೂ ಸೇರಿಸಿ ಒಟ್ಟು ಮೂರು ತಿಂಗಳ ಅರಿಯರ್ಸ್ ಸೇರಿ ಬರುತ್ತದೆ.
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ಡಿಎಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡುತ್ತದೆ. ಜನವರಿಯಲ್ಲಿ ಹಾಗೂ ಜುಲೈನಿಂದ ಪೂರ್ವಾನ್ವಯವಾಗುವಂತೆ ನಂತರದ ತಿಂಗಳುಗಳಲ್ಲಿ ಡಿಎ ಪರಿಷ್ಕರಣೆ ನಡೆಸುವುದು ರೂಢಿ. ಈ ಮೂಲಕ ಹಾಲಿ ಕೇಂದ್ರ ಸರ್ಕಾರಿ ನೌಕರರು ಡಿಎ ಪಡೆದರೆ ಪಿಂಚಣಿದಾರರು ಡಿಆರ್ (ಡಿಯರ್‌ನೆಸ್ ರಿಲೀಫ್) ಸ್ವೀಕರಿಸುತ್ತಾರೆ.