ಗುವಾಹಟಿ: ಮಣಿಪುರದಲ್ಲಿ ಇಂದು (ಬುಧವಾರ) ತೀವ್ರತೆಯ ಎರಡು ಭೂಕಂಪ ಸಂಭವಿಸಿವೆ.
ಬೆಳಿಗ್ಗೆ 11.06ರ ಸುಮಾರಿಗೆ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಶಿಲ್ಲಾಂಗ್‌ನ ಪ್ರಾದೇಶಿಕ ಭೂಕಂಪ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನ ಕೇಂದ್ರಬಿಂದು ಪೂರ್ವ ಇಂಫಾಲ್‌ನ ಪೂರ್ವಕ್ಕೆ 44 ಕಿ.ಮೀ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿಯೂ ಕಂಪನದ ಅನುಭವವಾಗಿದೆ. ಮಣಿಪುರದಲ್ಲಿ 12.20 ಕ್ಕೆ 4.1 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರಬಿಂದು ಕಾಮ್ಜಾಂಗ್ ಜಿಲ್ಲೆಯಲ್ಲಿ 66 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪನದಿಂದಾಗಿ ಹಲವು ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳು ಹರಿದಾಡುತ್ತಿವೆ. ತೌಬಲ್ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರಿಗಾಗಿ ನಿಗದಿಪಡಿಸಿದ್ದ ಶಿಬಿರಗಳ ಕಟ್ಟಡಗಳಲ್ಲಿಯೂ ಬಿರುಕು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದ ವೇಳೆ ಯಾವುದೇ ಸಾವು- ನೋವು ಸಂಭವಿಸಿರುವುದಾಗಿ ಇದುವರೆಗೂ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.